ಗ್ರಾಪಂ ಚುನಾವಣೆಗೆ 1853 ಕೆಎಸ್‌ಆರ್‌ಟಿಸಿ ಬಸ್ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.21- ಗ್ರಾಮ ಪಂಚಾಯ್ತಿ ಚುನಾವಣೆಗೆ ಕೆಎಸ್‌ಆರ್‌ಟಿಸಿಗೆ 1853 ಬಸ್‍ಗಳನ್ನು ಒಪ್ಪಂದದ ಮೇಲೆ ನೀಡಲಾಗಿದೆ.  ಮೊದಲ ಹಂತದ ಗ್ರಾಮಪಂಚಾಯ್ತಿ ಚುನಾವಣೆಗೆ ನಾಳೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಬಳಸಿಕೊಳ್ಳಲಾಗಿದೆ.  ಮತಗಟ್ಟೆಗಳಿಗೆ ಸಿಬ್ಬಂದಿ, ಮತಪೆಟ್ಟಿಗೆ ಮತ್ತಿತರ ಸಾಮಾಗ್ರಿಗಳನ್ನು ಕೊಂಡೊಯ್ಯಲು ಮತ್ತು ಮರಳಿ ಕರೆತರಲು ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ದೈನಂದಿನ ಮಾರ್ಗಗಳಲ್ಲಿ ಸಂಚರಿಸುವ ಬಸ್‍ಗಳನ್ನು ಹೊರತುಪಡಿಸಿ ಹೆಚ್ಚುವರಿ ಬಸ್‍ಗಳನ್ನು ಒಪ್ಪಂದದ ಮೇರೆಗೆ ಗ್ರಾಪಂ ಚುನಾವಣಾ ಕಾರ್ಯಕ್ಕೆ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ  ಮೂಲಗಳು ತಿಳಿಸಿವೆ.  ನಿತ್ಯ ಸುಮಾರು 5000 ಬಸ್‍ಗಳ ಸೇವೆಯನ್ನು ಒದಗಿಸಲಾಗುತ್ತಿತ್ತು. ಗ್ರಾಮಪಂಚಾಯ್ತಿ ಚುನಾವಣೆಗೆ ಬಸ್‍ಗಳನ್ನು ನೀಡಿದ್ದರೂ ಇನ್ನು 3,500 ಬಸ್‍ಗಳಿದ್ದು, ಪ್ರಯಾಣಿಕರಿಗೆ ಹೆಚ್ಚಿನ ರೀತಿಯ ತೊಂದರೆಯಾಗುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಸ್ಪಷ್ಟಪಡಿಸಿದೆ.

ನಾಳೆ ಮತದಾನ ನಡೆಯುವುದರಿಂದ ಸಹಜವಾಗಿ ಪ್ರಯಾಣಿಕರ ಸಂಖ್ಯೆಯು ಇಳಿಮುಖವಾಗಿರುತ್ತದೆ. ಹೀಗಾಗಿ ಪ್ರಯಾಣಿಕರಿಗೆ ಬಸ್ ಸೇವೆಯಲ್ಲಿ ತೊಂದರೆಯಾಗುವುದಿಲ್ಲ ಎಂದು ತಿಳಿಸಲಾಗಿದೆ.

ಬೆಂಗಳೂರು ವಿಭಾಗ -32, ರಾಮನಗರ -84, ತುಮಕೂರು-118, ಕೋಲಾರ-125, ಚಿಕ್ಕಬಳ್ಳಾಪುರ -139, ಮೈಸೂರು ಗ್ರಾಮಾಂತರ -176, ಮಂಡ್ಯ-155, ಚಾಮರಾಜನಗರ-110, ಹಾಸನ-114, ಚಿಕ್ಕಮಗಳೂರು-153, ಮಂಗಳೂರು-188, ಪುತ್ತೂರು-55, ದಾವಣಗೆರೆ-78, ಶಿವಮೊಗ್ಗ-149, ಚಿತ್ರದುರ್ಗ-177 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಗ್ರಾಮಪಂಚಾಯ್ತಿ ಚುನಾವಣೆಗಳಿಗೆ ನೀಡಲಾಗಿದೆ.

Facebook Comments