ಗ್ರಾಮ ಪಂಚಾಯಿತಿ ಚುನಾವಣೆ 2021ರ ಫೆಬ್ರವರಿಗೆ ಮುಂದೂಡಿಕೆ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6- ಈ ವರ್ಷದ ಡಿಸೆಂಬರ್‍ನಲ್ಲಿ ನಡೆಯಬೇಕಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು 2021ರ ಫೆಬ್ರವರಿಗೆ ಮುಂದೂಡುವ ಸಾಧ್ಯತೆಯಿದೆ. ಡಾ.ಎಂ.ಕೆ ಸುದರ್ಶನ್ ನೇತೃತ್ವದ ತಜ್ಞರ ಸಮಿತಿಯು ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಅಪಾಯಕಾರಿ ಎಂಬ ಎಚ್ಚರಿಕೆಯ ವರದಿಯನ್ನು ಸಲ್ಲಿಸಿದೆ.

ತಜ್ಞರ ಸಮಿತಿಯೇ ಗ್ರಾಮಪಂಚಾಯ್ತಿ ಚುನಾವಣೆ ನಡೆಸುವುದು ಈ ಸಂದರ್ಭದಲ್ಲಿ ಸಕಾಲವಲ್ಲ ಎಂಬ ವರದಿ ನೀಡಿರುವುದರಿಂದ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ. ಹೀಗಾಗಿ ಬಹುನಿರೀಕ್ಷಿತ ಗ್ರಾಮ ಪಂಚಾಯ್ತಿ ಚುನಾವಣೆ ಈ ವರ್ಷದ ಅಂತ್ಯದೊಳಗೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಚುನಾವಣೆ ನಡೆಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುವ ಸಾಧ್ಯತೆಯಿದೆ. ಚುನಾವಣೆ ನಡೆಸಿದ್ದೇ ಆದರೆ ಕೊರೋನಾ ಸೋಂಕನ್ನು ಮನೆ ಬಾಗಿಲಿಗೆ ತಂದು ಕೂರಿಸಿದಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಗ್ರಾಮ ಪಂಚಾಯತಿ ಚುನಾವಣೆ ಸದ್ಯಕ್ಕೆ ಬೇಡ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಮನೆಮನೆಗೆ ಕೋವಿಡ್ ತಲುಪಿಸಿದಂತೆ ಆಗುತ್ತದೆ. ಫೆಬ್ರವರಿವರೆಗೆ ಚುನಾವಣೆ ಮುಂದೂಡುವುದು ಒಳಿತು ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸ ಬೇಕಾಗುತ್ತದೆ, ಇದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ ಎಂ ದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.  ಈ ಚುನಾವಣೆಗಳ ನಂತರ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಬಹುದು ಎಂದು ತಜ್ಞರ ಸಮಿತಿ ತಿಳಿಸಿದೆ. 50,000 ಕ್ಕೂ ಹೆಚ್ಚು ಬೂತ್ಗಳನ್ನು ಸ್ಥಾಪಿಸಬೇಕಾಗಿದ್ದು, ರಾಜ್ಯದ ಎಲ್ಲಾ 6,021 ಪಂಚಾಯಿತಿಗಳಿಂದ ಲಕ್ಷಾಂತರ ಜನರು ಸ್ಪರ್ಧಿಸಲಿದ್ದಾರೆ. ಈ ವೇಳೆ ಜನರು ಸಾಮಾಜಿಕ ಅಂತರ ಕಾಪಾಡುವುದು ಕಷ್ಟ.

ಹರಡುವಿಕೆಯನ್ನು ತಡೆಗಟ್ಟಲು ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆಗಳಲ್ಲಿ ಅನೇಕ ಜನರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಾದವಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಯನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ನಾವು ಚುನಾವಣೆಯನ್ನು ಫೆಬ್ರವರಿಗೆ ಮುಂದೂಡುವಂತೆ ಮನವಿ ಮಾಡಿದ್ದೇವೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

Facebook Comments