ವಿಪಕ್ಷಗಳ ಸಭಾತ್ಯಾಗದ ನಡುವೆ ಪಂಚಾಯಿತಿ ಮೀಸಲಾತಿ ತಿದ್ದುಪಡಿ ವಿಧೇಯಕ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ನಿಗದಿ ಹಾಗೂ ಕ್ಷೇತ್ರ ವಿಂಗಡಣೆ ಅಧಿಕಾರವನ್ನು ರಾಜ್ಯ ಚುನಾವಣೆ ಆಯೋಗದಿಂದ ಹಿಂಪಡೆದು, ರಾಜ್ಯ ಸರ್ಕಾರ ತನ್ನಲ್ಲೇ ಉಳಿಸಿಕೊಳ್ಳುವ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್-ಹಾಗೂ ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕವನ್ನು ಯಥಾವತ್ತಾಗಿ ಇಂದು ವಿಧಾನ ಪರಿಷತ್‍ನಲ್ಲಿ ಮಂಡಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ಪರ್ಯಾವಲೋಚನೆ ಹಾಗೂ ಅಂಗೀಕಾರಕ್ಕೆ ಮನವಿ ಮಾಡಿದರು.

ಹಲವಾರು ಮಂದಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಬಳಿಕ ಉತ್ತರ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಪಂಚಾಯತ್ ರಾಜ್ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ 2600 ತಕರಾರು ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿವೆ. ಕ್ಷೇತ್ರ ಪುನರ್ ವಿಂಗಡಣೆಯ ಲೋಪಗಳನ್ನು ಸರಿ ಪಡಿಸಲು ಈ ವಿಧೇಯಕವನ್ನು ರಪಿಸಲಾಗಿದೆ.

ಅದನ್ನು ಎಲ್ಲಾ ಪಕ್ಷಗಳ ಸದಸ್ಯರು ಬೆಂಬಲಿಸಿದ್ದಾರೆ. ಇದನ್ನು ದಯವಿಟ್ಟು ಅಂಗೀಕಾರ ಮಾಡಿ, ನಾವು ಪಕ್ಷದ ನಿಲುವಿಗಾಗಿ ವಿರೋಧ ಮಾಡುತ್ತೇವೆ ನೀವು ಅದನ್ನು ಪರಿಗಣಿಸದೆ ವಿಧೇಯಕವನ್ನು ಅಂಗೀಕಾರ ಮಾಡಿ ಎಂದು ಎಲ್ಲಾ ಪಕ್ಷಗಳ ಶಾಸಕರು ಖಾಸಗಿಯಾಗಿ ನನ್ನ ಬಳಿ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರಸ್‍ನ ಕೆಲಸ ಶಾಸಕರು ವಿಧೇಯಕಕ್ಕೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದಾಗ, ಕಾಂಗ್ರೆಸ್ ಎಸ್.ಆರ್.ಪಾಟೀಲ್ ಮತ್ತು ಬಿ.ಕೆ.ಹರಿಪ್ರಸಾದ್ ವಿರೋಧ ವ್ಯಕ್ತ ಪಡಿಸಿದರು.

ಹಾಗೇ ಹೇಳಿದ್ದರೆ ಆ ಸದಸ್ಯರ ಹೆಸರನ್ನು ಇಲ್ಲಿ ಬಹಿರಂಗವಾಗಿ ಹೇಳಿ. ಸಚಿವರು ಈ ರೀತಿ ಮಾತನಾಡುವ ಮೂಲಕ ಶಿಷ್ಠಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಬಿಜೆಪಿಯ ಬಹಳಷ್ಟು ಶಾಸಕರು ನಮ್ಮ ಬಳಿ ಖಾಸಗಿಯಾಗಿ ಬಹಳಷ್ಟನ್ನು ಹೇಳಿದ್ದಾರೆ. ಅದನ್ನೇಲ್ಲಾ ಶಾಸನ ಸಭೆಯಲ್ಲಿ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎಸ್.ಆರ್.ಪಾಟೀಲ್ ಅವರು ನಾವು ಹೇಳಿದ ಮಾತುಗಳನ್ನು ಮನವರಿಕೆ ಮಾಡಿಕೊಂಡು ವಿಧೇಯಕವನ್ನು ವಾಪಾಸ್ ಪಡೆಯುತ್ತಾರೆ ಎಂದುಕೊಂಡಿದ್ದೇವು. ಆದರೂ ಸರ್ಕಾರ ಮೊಂಡುತನದಿಂದ ವಿಧೇಯಕ ಅಂಗೀಕರ ಪಡೆಯಲು ಮುಂದಾಗಿದೆ ಎಂದು ಆಕ್ಷೇಪಿಸಿ ಸಭಾತ್ಯಾಗ ಮಾಡಿದರು.  ನಂತರ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

Facebook Comments