ಭಾರತದಲ್ಲಿ 91 ಲಕ್ಷ ಗಡಿ ದಾಟಿದ ಕೊರೊನಾ ಪೀಡಿತರ ಸಂಖ್ಯೆ
ನವದೆಹಲಿ, ನ.23-ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 91 ಲಕ್ಷದ ಗಡಿ ದಾಟಿದ್ದು , ಕಳೆದ 24 ಗಂಟೆಗಳಲ್ಲಿ 44,059 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ 91 ಲಕ್ಷ ದಾಟಿದರೂ ಇದುವರೆಗೂ 85,62,641 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದಾಖಲೆಗಳು ದೃಢಪಟ್ಟಿವೆ.
ಸೋಂಕಿತರ ಸಂಖ್ಯೆ 91,39,865ಕ್ಕೆ ಏರಿಕೆಯಾಗಿದ್ದು , ನಿನ್ನೆಯಿಂದ 511 ಮಂದಿ ಸಾವನ್ನಪ್ಪಿದ್ದು , ಸತ್ತವರ ಸಂಖ್ಯೆ 1,33,738ಕ್ಕೆ ಏರಿಕೆಯಾಗಿದೆ.
ಆದರೂ 5 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ತುಸು ನೆಮ್ಮದಿ ತರಿಸಿದೆ.
ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.93.68ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ.1.46ಕ್ಕೆ ಸೀಮಿತಗೊಂಡಿದೆ. ಆರಂಭದಲ್ಲಿ ಹೆಚ್ಚಾಗಿದ್ದ ಕೊರೊನಾ ಸೋಂಕಿನ ಸಂಖ್ಯೆ ಕಾಲಕ್ರಮೇಣ ಕ್ಷೀಣಿಸುತ್ತಾ ಬಂದರೂ ಇತ್ತೀಚೆಗೆ ಎರಡನೆ ಅಲೆ ಆರಂಭವಾಗುವ ಮುನ್ಸೂಚನೆ ಕಾಣಿಸಿಕೊಂಡಿರುವುದರಿಂದ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕೋಟಿ ದಾಟುವ ಸಾಧ್ಯತೆಗಳು ನಿಚ್ಚಳವಾಗಿದೆ.