ಐಟಿ ಎದುರು ವಿಚಾರಣೆಗೆ ಹಾಜರಾದ ಪರಂ, ದಾಖಲೆ ಸಲ್ಲಿಸಲು 3 ದಿನ ಕಾಲಾವಕಾಶ ನೀಡಿದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15-ಶಿಕ್ಷಣ ಸಂಸ್ಥೆ, ನಿವಾಸ, ಕಚೇರಿಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಡಾ.ಜಿ.ಪರಮೇಶ್ವರ್ ಅವರು ದಾಖಲೆಗಳ ಸಲ್ಲಿಕೆಗೆ ಮೂರು ದಿನಗಳ ಕಾಲಾವಕಾಶಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯಲ್ಲಿನ ಐಟಿ ಕಚೇರಿಗೆ ಇಂದು ಬೆಳಗ್ಗೆ 10.30ಕ್ಕೆ ಬಂದು ಐಟಿ ಅಧಿಕಾರಿಗಳ ಎದುರು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿಚಾರಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಗೆ ಸಂಬಂಧಿಸಿದಂತೆ ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದೆ.

ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದೆ. ಐಟಿ ಅಧಿಕಾರಿಗಳೂ ಕೂಡ ನಮ್ಮ ಕಾಲೇಜು ಹಾಗೂ ಇನ್ನಿತರೆಡೆ ಪಡೆದಿರುವ ದಾಖಲಾತಿಗಳ ಪರಿಶೀಲನೆಗೆ ನಮಗೂ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದರು.

ಇದಲ್ಲದೆ, ನಮ್ಮ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದವರಿಗೂ ನೋವಿರುತ್ತದೆ ಎಂದು ಹೇಳಿದರು. ವಿಚಾರಣೆಯಲ್ಲಿ ನಿಮ್ಮ ಐಡೆಂಟಿಟಿ ಕೇಳಿದರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದಾಳಿ ಸಂದರ್ಭದಲ್ಲೇ ಎಲ್ಲಾ ಪಂಚನಾಮೆ ಮಾಡಿ ನನ್ನ ಹಾಗೂ ಕಾಲೇಜು ಸಿಬ್ಬಂದಿಗಳ ರುಜು ಪಡೆದಿದ್ದಾರೆ ಎಂದು ಹೇಳಿದರು.

ಸಮಗ್ರ ತನಿಖೆಗೆ ಒತ್ತಾಯ: ರಮೇಶ್ ಆತ್ಮಹತ್ಯೆ ಬಗ್ಗೆ ಸಾಕಷ್ಟು ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ. ಕೆಲವರು ನಾನೇ ಕೊಲೆ ಮಾಡಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.  ಸರ್ಕಾರ ಯಾವುದೇ ತನಿಖಾ ಸಂಸ್ಥೆಯಿಂದ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಪರಮೇಶ್ವರ್ ಒತ್ತಾಯಿಸಿದರು.

ನನ್ನ ಪಿಎ ರಮೇಶ್ ಅವರು ಯಾವ ಕಾರಣಕ್ಕೆ ಸಾವನ್ನಪ್ಪಿದರು ಎಂಬ ಅಂಶ ಹೊರಬರಬೇಕಾಗಿದೆ. ಸರಿಯಾದ ರೀತಿ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.

Facebook Comments