ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ನ.30- ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಬಿಜೆಪಿ ಸರ್ಕಾರ ಫಲಿತಾಂಶದ ನಂತರ ಪತನಗೊಳ್ಳುವುದು ಶತಸಿದ್ಧ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಭವಿಷ್ಯ ನುಡಿದರು.

ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಗೆಸ್ಟ್‍ಹೌಸ್‍ನಲ್ಲಿ ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿ ಗೆದ್ದು ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಸಹಕರಿಸಿ ನಂತರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಚುನಾವಣೆಗೆ ನಿಂತಿರುವುದರಿಂದ ರಾಜ್ಯದ ಜನರಿಗೆ ಹಾಗೂ ಕ್ಷೇತ್ರದ ಜನರಿಗೆ ವಂಚನೆ ಮಾಡಿದ ಅನರ್ಹ ಶಾಸಕರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ದುಡ್ಡು ಹಾಗೂ ಅಧಿಕಾರಕ್ಕೆ ತಮ್ಮನ್ನು ಮಾರಿಕೊಂಡಿರುವ ಶಾಸಕರುಗಳು ಮತ್ತೊಮ್ಮೆ ಜನರ ಬಳಿ ಹೋಗಿ ಮತ ಹಾಕಿ ಎಂದು ಕೇಳಲು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ಪರಮೇಶ್ವರ್ ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರುಗಳಿಗೆ ಪಕ್ಷ ಎಲ್ಲವನ್ನೂ ನೀಡಿದೆ ಆದರೆ ಅದನ್ನು ಧಿಕ್ಕರಿಸಿ ಇಲ್ಲಸಲ್ಲದ ಸಬೂಬು ಹೇಳಿಕೊಂಡು ರಾಜೀನಾಮೆ ನೀಡಿ ಮತ್ತೊಂದು ಪಕ್ಷಕ್ಕೆ ಹೋಗಿ ಚುನಾವಣೆಗೆ ನಿಲ್ಲುವುದು ಎಷ್ಟರಮಟ್ಟಿಗೆ ಸರಿ ಇದನ್ನು ಚುನಾವಣೆಗೆ ನಿಂತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಜನರು ಪ್ರಶ್ನೆ ಮಾಡಬೇಕೆಂದು ಈ ಸಂದರ್ಭದಲ್ಲಿ ಅವರು ಕರೆನೀಡಿದರು.

ಮುಖ್ಯಮಂತ್ರಿಗಳಾಗಿ ಬಿಎಸ್ ಯಡಿಯೂರಪ್ಪ ಇರುವುದು ಬಹುತೇಕ ಬಿಜೆಪಿ ಪಕ್ಷದ ಮುಖಂಡರುಗಳಿಗೆ ಇಷ್ಟವಿಲ್ಲ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕಾಲೆಳೆಯಲು ಹೈಕಮಾಂಡ್ ಒಂದಲ್ಲ ಒಂದು ರೀತಿಯ ತಂತ್ರವನ್ನು ಎಳೆಯುತ್ತಿದೆ ಇತ್ತೀಚಿನ ದಿನಗಳಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರವಾಗಿ ಅವರ ಪಕ್ಷದ ಹೈಕಮಾಂಡ್ ನಡೆದುಕೊಂಡ ರೀತಿಯೇ ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ ಎಂದರು.

ದಿನೇಶ್ ಗುಂಡೂರಾವ್. ಲಕ್ಷ್ಮಿ ಹೆಬ್ಬಾಳ್ಕರ್. ಸತೀಶ್ ಜಾರಕಿಹೊಳಿ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ, ಸೇರಿದಂತೆ ಹಲವಾರು ನಾಯಕರುಗಳು ಸಿದ್ದರಾಮಯ್ಯ ಅವರ ಜೊತೆಯಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಒಬ್ಬರೇ ಏಕಾಂಗಿಯಾಗಿ ಚುನಾವಣೆಯ ಎದುರಿಸುತ್ತಿದ್ದಾರೆ ಎಂಬ ಅಭಿಪ್ರಾಯ ಸರಿಯಲ್ಲ ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತಾರೆ. ರಾಜಕೀಯದಲ್ಲಿ ಯಾವ ಸಂದರ್ಭ ಯಾವ ಸನ್ನಿವೇಶ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಈಗಾಗಲೇ ಇದರ ಬಗ್ಗೆ ಸುಳಿವು ಕೊಟ್ಟಿದೆ. ಅದರ ಹಿನ್ನೆಲೆಯಲ್ಲಿ ಮೈತ್ರಿ ಆದರೆ ಆಶ್ಚರ್ಯವೇನಿಲ್ಲ ಎಂದರು.
ಒಟ್ಟಾರೆ ಉಪ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಂಡು ಮತ್ತೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Facebook Comments