ಸರ್ಕಾರ ಸುಭದ್ರ ಎಂದ: ಡಿಸಿಎಂ, ರಮೇಶ್ ನಮ್ಮ ಫ್ರೆಂಡ್ ಎಂದ: ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.25-ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಆತಂಕವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿಯವರು ಸರಕಾರ ಬೀಳಲಿದೆ ಎಂದು ಸುಮ್ಮನೆ ಮಾತಾಡುತ್ತಿದ್ದಾರೆ ಅಷ್ಟೆ. ಸರ್ಕಾರ ಬಗ್ಗೆ ಯಾವುದೇ ಆತಂಕವಿಲ್ಲ. ಇಂದುಮುಖ್ಯಮಂತ್ರಿಗಳೊಂದಿಗೆ ಬರಗಾಲದ ಬಗ್ಗೆ ಅಷ್ಟೇ ನಾವು ಚರ್ಚೆ ಮಾಡಿದ್ದೇವೆ.

ಸರ್ಕಾರ ಬೀಳಲಿದೆ ಎಂಬ ಊಹಾಪೊಹದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆ ಹಿನ್ನಲೆಯಲ್ಲಿ ಆಡಳಿತ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಡಳಿತ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಿದ್ದೇವೆ.

ಚುನಾವಣೆ ಆಯೋಗಕ್ಕೆ ನೀತಿ ಸಂಹಿತೆ ಸಡಿಲ ಮಾಡಲು ಮನವಿ ಮಾಡುವಂತೆ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಚುನಾವಣೆ ಆಯೋಗಕ್ಕೆ ನೀತಿ ಸಂಹಿತೆ ಸಡಿಲ ಮಾಡಿ ಆಡಳಿತ ಮಾಡಲು ಅವಕಾಶ ಕೊಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ನಾವೆಲ್ಲ ಒಂದೇ ಕುಟುಂಬದವರು:
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಶಾಸಕ ರಮೇಶ್ ಜಾರಕಿಹೊಳಿ ನನಗೆ ಎರಡು ಏಟು ಹೊಡೆದು ಬಿಡಲಿ, ಆದರೆ ನನಗೇನು ಬೇಜಾರು ಇಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಕುಟುಂಬದಲ್ಲಿ ಅಣ್ಣ ತಮ್ಮಂದಿರ ತಪ್ಪು ಸಹಜ. ರಮೇಶ್ ಜಾರಕಿಹೊಳಿ ಜೊತೆಗೆ 80 ಶಾಸಕರು ಇದ್ದೇವೆ ಎಂದರು.

ಸರ್ಕಾರ ಬೀಳುತ್ತೆ ಅಂತ ಯಾವ ಕಾಂಗ್ರೆಸ್ ಶಾಸಕರು ಹೇಳಿಲ್ಲ. ರಮೇಶ್ ಜಾರಕಿಹೋಳಿ ಕಾಂಗ್ರೆಸ್ ನಾಯಕ. ಯೂತ್ ಕಾಂಗ್ರೆಸ್‍ನಿಂದ ಬಂದು, ಎಂಎಲ್‍ಎ, ಸಚಿವರಾಗಿರೋದು. ಅವರು ಒಂದೊಂದು ಬಾರಿ ಹಾಗೇ ಮಾತಾಡ್ತಾರೆ ಅಷ್ಟೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ, ಸಚಿವ ಸತೀಶ್ ಜಾರಕಿಹೊಳಿ ಇಬ್ಬರೂ ಅಣ್ಣ ತಮ್ಮಂದಿರಾಗಿದ್ದು, ಅವರಿಬ್ಬರೇ ಮಾತಾಡಿಕೊಳ್ಳುತ್ತಾರೆ. ಅದರಲ್ಲಿ ಏನು ತಪ್ಪಿಲ್ಲ. ಸತೀಶ್ ಜಾರಕಿಹೋಳಿ ಸಿಎಂ ಮಾಡಿ ಅಂತ ಹೇಳಿದ್ದರು. ಮಾಡಿಲ್ಲ ಅಂತ ಪಕ್ಷ ಬಿಟ್ಟು ಹೋಗ್ತಾರಾ? ಎಂದು ಪ್ರಶ್ನಿಸಿದರು.

ರಮೇಶ್ ನಮ್ಮ ಫ್ರೆಂಡ್ , ನಮ್ಮ ಮನೆಯವರು. ಅದೆಲ್ಲ ಏನು ತೊಂದರೆ ಇಲ್ಲ. ನಾವು ಸ್ವಂತ ಮನೆ ಮಕ್ಕಳು. ಒಂದೊಂದು ಬಾರಿ ಹೀಗಾಗುತ್ತದೆ. ಏನ್ ಮಾಡೋಕೆ ಆಗುತ್ತೆ. ಅಣ್ಣ-ತಮ್ಮಂದಿರು ಜಗಳ ಆಡಿದ್ವಿ ಅಂತ ಅವರನ್ನು ಬಿಡೋಕೆ ಆಗುತ್ತಾ ನಾವೆಲ್ಲ ಒಂದು ಪಾರ್ಟಿಯಲ್ಲಿ ಇರೋರು ಎಂದು ಹೇಳಿದರು.

Facebook Comments