ಮತ ಎಣಿಕೆ ವೇಳೆ ಹದ್ದಿನ ಕಣ್ಣಿಡುವಂತೆ ಪಕ್ಷದ ಏಜೆಂಟರಿಗೆ ಪರಮೇಶ್ವರ್ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 21- ಮತ ಎಣಿಕೆ ವೇಳೆ ಹದ್ದಿನ ಕಣ್ಣಿಟ್ಟು ಪ್ರತಿಯೊಂದನ್ನೂ ಗಮನಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್-ಜೆಡಿಎಸ್ ಪಕ್ಷದ ಏಜೆಂಟರಿಗೆ ತಾಕೀತು ಮಾಡಿದರು. ಜಿಲ್ಲಾ ಸರ್ಕಾರಿ ಜ್ಯೂನಿಯ್ ಕಾಲೇಜು ಮೈದಾನದಲ್ಲಿ ಲೋಕಸಭಾ ಚುನಾವಣೆ ವೇಳೆ ಏಜೆಂಟರುಗಳಾಗಿ ಕರ್ತವ್ಯ ನಿರ್ವಹಿಸುವ ಹಾಗೂ ಮತ ಎಣಿಕೆ ಕೇಂದ್ರಕ್ಕೆ ತೆರಳಿದ ಏಜೆಂಟರುಗಳ ಸಭೆ ಕರೆಯಲಾಗಿತ್ತು.

ಮತ ಎಣಿಕೆ ದಿನದಂದು ವಿವಿ ಪ್ಯಾಟ್ ಹಾಗೂ ಮತಯಂತ್ರಗಳಲ್ಲಿನ ಮತ ಪರಿಶೀಲನೆ ವೇಳೆ ಏಜೆಂಟರು ಸರಿಯಾಗಿ ನೋಡಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಏಜೆಂಟರಿಗೆ ತಿಳಿಸಿದ್ದಾರೆ.

ದೇಶಾದ್ಯಂತ ಕಳೆದ ಎರಡು ದಿನಗಳಿಂದ ಚುನಾವಣೋತ್ತರ ಸಮೀಕ್ಷೆಗಳ ವರದಿ ಪ್ರಕಟವಾಗುತ್ತಿದೆ. ಅದರಲ್ಲಿ ಎನ್‍ಡಿಎ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು ವಿಷಯ ಹಬ್ಬಿದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಮಾಯಾವತಿ, ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ಪಕ್ಷಗಳ ಮುಖಂಡರು ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ದೇಶಾದ್ಯಂತ 23ರಂದು ಮತ ಎಣಿಕೆ ದಿನದಂದು ಪ್ರತಿಯೊಬ್ಬ ಏಜೆಂಟರು ಹದ್ದಿನ ಕಣ್ಣಿಟ್ಟು ಕೆಲಸ ಮಾಡುವಂತೆ ಹೇಳಿದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮತ್ತು ಇತರೆ ಮುಖಂಡರು ಏಜೆಂಟರುಗಳಿಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ದೇಶದ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದು ಸಭೆ ನಡೆಸಿ ಎಣಿಕೆ ಕೇಂದ್ರದಲ್ಲಿರುವ ಏಜೆಂಟರುಗಳಿಗೆ ಅರಿವು ಮೂಡಿಸಲಾಯಿತು.

ಮತ ಎಣಿಕೆ ವೇಳೆ ಏನಾದರೂ ಲೋಪದೋಷ ಕಂಡುಬಂದರೆ ಅನುಮಾನ ಬಂದರೆ ಕೂಡಲೇ ಅಲ್ಲಿರುವ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಈ ವೇಳೆ ಜೆಡಿಎಸ್, ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

Facebook Comments