ಪಶ್ಚಿಮಘಟ್ಟಗಳಿಂದ ನೀರು ಹರಿಸುವ ಬೃಹತ್ ಯೋಜನೆ ನೆನೆಗುದಿಗೆ ಬೀಳುತ್ತಿದೆ ಎಂದು ಪರಮೇಶ್ವರ್ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು , ಆ. 2- ಪಶ್ಚಿಮ ಘಟ್ಟಗಳಿಂದ ಶಿವಮೊಗ್ಗದ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ರೂಪಿಸಲಾಗಿದ್ದ ಬೃಹತ್ ನೀರಾವರಿ ಯೋಜನೆ ಈಗ ನೆನೆಗುದಿಗೆ ಬೀಳುತ್ತಿದೆ ಇದು ದುರದೃಷ್ಟದ ಸಂಗತಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರವನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಬಹುತೇಕ ಸಚಿವರು ಕೂಡ ಸಾಥ್ ನೀಡಿದ್ದರು ಆದರೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬದಲಾವಣೆ ಹಿನ್ನೆಲೆಯಲ್ಲಿ ಆ ಎಲ್ಲ ಯೋಜನೆಗಳು ಈಗ ನೆನೆಗುದಿಗೆ ಬೀಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ಬರಬೇಕೆಂದು ಬಂದವನಲ್ಲ ನಾನು ರಾಜಕೀಯ ಪ್ರವೇಶಿಸಿದ್ದಕ್ಕೆ ಮೂಲ ಕಾರಣ ರಾಜೀವ್ ಗಾಂಧಿ ಅಂದಿನಿಂದ ಶಾಸಕನಾಗಿ ಸಚಿವನಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದೇನೆ ಎಂದರು. ರಾಜಕೀಯ ನಿಂತ ನೀರಲ್ಲ ಅದು ಒಂದು ರೀತಿ ಹರಿಯುವ ನೀರಾಗಿದೆ.ನಮ್ಮ ಪಕ್ಷದ ರಾಜೀವ್ ಗಾಂಧಿಯವರು ಸೇರಿದಂತೆ ಹಲವಾರು ಪ್ರಧಾನ ಮಂತ್ರಿಗಳು ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರು ಸೇರಿದಂತೆ ಕರ್ನಾಟಕದ ಹಲವಾರು ಮಹನೀಯರು ನನಗೆ ಸಾಥ್ ನೀಡಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಒಂದು ಸುವರ್ಣ ಅವಕಾಶ ನನಗೆ ದೊರೆತಾಗ ನಾನು ಹಲವಾರು ಯೋಜನೆಗಳನ್ನು ತುಮಕೂರಿಗೆ ತಂದು ತುಮಕೂರನ್ನು ಇಡೀ ರಾಜ್ಯಕ್ಕೆ ಮಾದರಿಯಾಗಲು ಪ್ರಯತ್ನ ಪಡುತ್ತಿದ್ದೆ ಪ್ರತಿನಿತ್ಯ ತುಮಕೂರು ಜಿಲ್ಲೆ ಸೇರಿದಂತೆ ತುಮಕೂರು ನಗರದಿಂದ ಬೆಂಗಳೂರಿಗೆ ಸಾವಿರಾರು ಮಂದಿ ಪ್ರಯಾಣ ಮಾಡುತ್ತಿದ್ದಾರೆ .ಇವರಿಗೆ ಅನುಕೂಲವಾಗಲೆಂದು ನೆಲಮಂಗಲಕ್ಕೆ ಬರುತ್ತಿರುವ ಮೆಟ್ರೊವನ್ನು ತುಮಕೂರಿಗೆ ವಿಸ್ತರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಅಷ್ಟರಲ್ಲಿ ರಾಜಕೀಯ ವಿದ್ಯಮಾನಗಳು ನಡೆದ ಪರಿಣಾಮ ಈಗ ನಮಗೆ ಅಧಿಕಾರ ಕೈತಪ್ಪಿದೆ ಹಾಗೆಂದು ನಾನು ಧೃತಿಗೆಡುವುದಿಲ್ಲ ಎಂದು ಹೇಳಿದರು.

ಇನ್ನು ಹದಿನೈದು ವರ್ಷ ಕಳೆದರೆ ಬೆಂಗಳೂರಿನಲ್ಲಿ ಜನರು ಕುಡಿಯುವ ನೀರಿಗೆ ಪ್ರಾಣ ಬಿಡುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಆಳುವ ಸರ್ಕಾರಗಳು ಯಾವೇ ಆಗಿರಲಿ ನಮಗೆ ದೂರದೃಷ್ಟಿ ಮುಖ್ಯವಾಗಿದೆ ಮುಂದಿನ ಇಪ್ಪತ್ತು ಮೂವತ್ತು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಈಗಲೇ ಕುಡಿಯುವ ನೀರಿನ ಯೋಜನೆಗಳನ್ನು ಸಿದ್ಧಪಡಿಸಿ ಕೊಳ್ಳಬೇಕಾಗಿದೆ ಎಂದರು.

ಬಿಜೆಪಿ ಉಳಿಯಲ್ಲ:
ಬಿಜೆಪಿಯವರ ಆಪರೇಷನ್ ಕಮಲ ಹೆಚ್ಚು ದಿನ ಉಳಿಯಲ್ಲ ಇದು ಅವರಿಗೆ ಮುಳುವಾಗಲಿದೆ ಕಾದು ನೋಡಿ ಎಂದ ಅವರು, ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆದು ಅಧಿಕಾರಕ್ಕೆ ಬಂದಿದ್ದಾರೆ ಒಂದೇ ಪಕ್ಷದಲ್ಲಿ ಗೆದ್ದು ಬಂದವರ ಶಾಸಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತಹದರಲ್ಲಿ ಬೇರೆ ಬೇರೆ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆದು ಅವರ ಮನಃಸ್ಥಿತಿಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ಹೇಳುವುದೇ ಒಂದು ಮಾಡುವುದೇ ಒಂದು ದ್ವೇಷ ರಾಜಕಾರಣ ಮಾಡಲ್ಲ ಎಂದ ಅವರು ಈಗ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ ಇದು ದ್ವೇಷದ ರಾಜಕಾರಣವಲ್ಲವೇ ಎಂದರು.

Facebook Comments