ಉಪಚುನಾವಣಾ ಸಿದ್ಧತೆ ಸಭೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.16- ಉಪಚುನಾವಣೆಗಳ ಸಿದ್ಧತೆಗೆ ಶನಿವಾರ ಕೆಪಿಸಿಸಿ ನಡೆಸಿದ ಸಭೆಯ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ, ಪಕ್ಷ ಆಹ್ವಾನ ನೀಡಿದ ಸಭೆಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದೆ ದೂರ ಉಳಿದಿದ್ದೇನೆ ಎಂಬುದು ಸರಿಯಲ್ಲ.

ಪಕ್ಷ ಕರೆದ ಎಲ್ಲಾ ಸಭೆಗಳಲ್ಲೂ ಭಾಗವಹಿಸುತ್ತೇನೆ. ಶನಿವಾರ ತುಮಕೂರಿನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ ಇತ್ತು. ಜೊತೆಗೆ ಅದೇ ದಿನ ಪಕ್ಷದ ಕಚೇರಿಯಲ್ಲಿ ಸಭೆ ನಡೆಯುವುದು ನನಗೆ ಗೊತ್ತಿರಲಿಲ್ಲ. ಪಕ್ಷದ ಕೆಲಸಗಳನ್ನು ನಾವುಗಳೆಲ್ಲಾ ಸೇರಿ ಮಾಡದೆ ಇದ್ದರೆ, ಮತ್ಯಾರು ಮಾಡುತ್ತಾರೆ ಎಂದರು.

ನೆರೆ ಪರಿಸ್ಥಿತಿ ನಿಭಾಯಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ. ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ನೆರೆ ಪರಿಸ್ಥಿತಿ ಇದೆ. ಸುಮಾರು 18 ರಿಂದ 19 ಜಿಲ್ಲೆಗಳು ಸಂಕಷ್ಟಕ್ಕೆ ಈಡಾಗಿವೆ. ಕೇಂದ್ರ ಸರ್ಕಾರವಂತೂ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ತನ್ನ ವಿವೇಚನಾಧಿಕಾರವನ್ನು ಬಳಸಿಕೊಂಡು, ಯಾವ ಯೋಜನೆಗಳನ್ನು ನಿಲ್ಲಿಸಿ ಅದರ ಅನುದಾನವನ್ನು ನೆರೆ ಸಂತ್ರಸ್ಥರಿಗೆ ಖರ್ಚು ಮಾಡಬೇಕು ಎಂಬ ಯೋಚನೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಹಿಂದಿನ ಸರ್ಕಾರಗಳು ಜನರ ಹಿತದೃಷ್ಠಿಯಿಂದ ಮತ್ತು ರಾಜ್ಯದ ಅಭಿವೃದ್ಧಿಯ ಕಾರಣಕ್ಕಾಗಿ ಕೆಲ ಯೋಜನೆಗಳನ್ನು ಜಾರಿಗೊಳಿಸಿತ್ತು. ಅವುಗಳಲ್ಲಿ ಕೆಲವನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಯೋಜನೆಗಳನ್ನು ನಿಲ್ಲಿಸಿರುವುದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ.

ಕೆಲವು ಮಹತ್ವದ ಯೋಜನೆಗಳನ್ನು ನಿಲ್ಲಿಸಲಾಗಿದೆ. ಅದರ ಹಿಂದೆ ರಾಜಕೀಯ ದ್ವೇಷವಿದೆ. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳು ಮುಗಿಯಲು ಮೂರ್ನಾಲ್ಕು ವರ್ಷಗಳ ಕಾಲಾವಧಿ ಬೇಕಿದೆ. ಅವುಗಳು ಪೂರ್ಣಗೊಂಡ ಬಳಿಕೆ ಅಂದರೆ ಮೂರು ವರ್ಷಗಳ ನಂತರ ಹಣ ಪಾವತಿ ಮಾಡಬೇಕಿದೆ. ಆದರೆ ಅಂತಹವುಗಳನ್ನು ನಿಲ್ಲಿಸಿದ್ದಾರೆ. ಇದು ಸರಿಯಲ್ಲ ಎಂದರು.

ನೆರೆಯಲ್ಲಿ ಲಕ್ಷಾಂತರ ಜಾನುವಾರುಗಳು ಸತ್ತಿವೆ. ಲಕ್ಷಾಂತರ ಎಕರೆ ಭೂಮಿ ಕೃಷಿ ಮಾಡಲು ಸಾಧ್ಯವಾಗದಂತೆ ಹಾಳಾಗಿದೆ. ಲಕ್ಷಾಂತರ ಜನ ನಿರ್ವಸತಿಗರಾಗಿದ್ದಾರೆ. ಅವರನ್ನು ಶಾಲೆ ಅಥವಾ ಸಮುದಾಯ ಭವನಗಳಲ್ಲಿ ಇರಿಸಲಾಗಿದೆ. ಅಲ್ಲಿ ಸರಿಯಾಗಿ ಊಟ ಕೊಡುತ್ತಿಲ್ಲ, ವ್ಯವಸ್ಥೆಗಳು ಸರಿಯಿಲ್ಲ. ಸರ್ಕಾರ ನೆರೆ ಸಂತಸ್ಥರ ಪರಿಸ್ಥಿತಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪರಮೇಶ್ವರ್ ಆರೋಪಿಸಿದರು.

Facebook Comments