ಐಟಿ ದಾಳಿ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ ಏನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.10- ಐಟಿ ಅಧಿಕಾರಿಗಳು ದಾಳಿ ಮಾಡಿದರೆ ಮಾಡಲಿ; ಅದಕ್ಕೆ ನಮ್ಮ ಅಭ್ಯಂತರವಿಲ್ಲ. ತಪ್ಪು ಇದ್ದರೆ ತಿಳಿಸಲಿ ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಲ್ ಆಗಿಯೇ ಪ್ರತಿಕ್ರಿಯಿಸಿದರು.

ಈ ಸಂಜೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ನಾನೇಕೆ ಐಟಿ ದಾಳಿಯ ಬಗ್ಗೆ ಹೆದರಲಿ. ಅವರ ಕೆಲಸಗಳನ್ನು ಮಾಡಿಕೊಳಲಿ ಬಿಡಿ. ಸಿದ್ಧಾರ್ಥ್ ಹೆಸರಿನ ಎಲ್ಲಾ ಸಂಸ್ಥೆಗಳ ವ್ಯವಹಾರವೂ ಕಾನೂನು ಪ್ರಕಾರವೇ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ರೀತಿಯ ಸಂದೇಹವಿಲ್ಲ. ಎರಡು ಮೆಡಿಕಲ್ ಕಾಲೇಜುಗಳಿವೆ.

ಅವುಗಳು ಕೂಡ ಸೂಸೂತ್ರವಾಗಿ ನಡೆಯುತ್ತಿವೆ. ಇತರೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಇದರ ಬಗ್ಗೆ ಐಟಿ ದಾಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು. ಐಟಿಯವರನ್ನು ನೀವೇಕೆ ದಾಳಿ ಮಾಡಿದಿರಿ ಎಂದು ಕೇಳಲು ಸಾಧ್ಯವೆ ? ಅದು ಅವರ ಕೆಲಸ. ಅವರ ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಐಟಿಯವರು ಕಾಲೇಜು, ಮನೆ ಎಲ್ಲವನ್ನೂ ಅವರು ದಾಳಿ ಮಾಡಿ ಪರಿಶೀಲನೆ ನಡೆಸಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು.

Facebook Comments