ಐಟಿ ದಾಳಿ : ಅ.15ರಂದು ವಿಚಾರಣೆಗೆ ಹಾಜರಾಗ್ತೀನಿ ಎಂದ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.12- ತಮ್ಮ ನಿವಾಸ, ಕಚೇರಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.15ರಂದು ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದು, ಅದರಂತೆ ಹಾಜರಾಗಲಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 7 ಗಂಟೆಗೆ ಸರ್ಚ್ ವಾರೆಂಟ್‍ನೊಂದಿಗೆ ಐಟಿ ಅಧಿಕಾರಿಗಳು ಬಂದಿದ್ದರು. ನಾನು ನನ್ನ ಕ್ಷೇತ್ರದ ಕೆರೆ ತುಂಬಿದ್ದಕ್ಕೆ ಪೂಜೆಗೆ ಹೋಗಿದ್ದೆ. ಮುಗಿಸಿ ಐಬಿಯಲ್ಲಿ ಇರುವಾಗ ಮಾಹಿತಿ ಬಂತು.

ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಬಳಿ ಸಾಕಷ್ಟು ವಾಹನಗಳು ಬಂದಿರುವ ಬಗ್ಗೆ ಮಾಹಿತಿ ಗೊತ್ತಾಯಿತು. ಬಳಿಕ ಐಬಿಗೆ ಬಂದ ಇಬ್ಬರು ಅಧಿಕಾರಿಗಳು ಬಂದು ಸದಾಶಿವ ನಗರ ಮನೆಗೆ ಕರೆದುಕೊಂಡು ಬಂದರು ಎಂದು ದಾಳಿಯ ಬಗ್ಗೆ ಮಾಹಿತಿ ನೀಡಿದರು. ಸಿದ್ದಾರ್ಥ ಕಾಲೇಜು ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ನನ್ನ ಸಹೋದರ ಕಾಲೇಜು ಜವಾಬ್ದಾರಿ ಹೊತ್ತಿದ್ದರು. ಈಗ ಕಳೆದ ಆರು ತಿಂಗಳಿಂದ ನಾನು ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಕಾಲೇಜಿನಲ್ಲಿ ದಾಖಲಾತಿ ವಿಚಾರವಾಗಿ ನನಗೆ ಗೊತ್ತಿಲ್ಲ. ಕಾಲೇಜ್ ಕಡೆಯಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಬರಲು ಹೇಳಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು. ಐಟಿ ದಾಳಿ ಸಂಬಂಧ ರಾಜಕೀಯ ಲೇಪ ಹಚ್ಚುವುದಿಲ್ಲ ಎಂದರು. ಸಾಕಷ್ಟು ಹಣ ದೊರೆತಿದೆ. ಹವಾಲಾ ಮೂಲಕ ವ್ಯವಹಾರ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸತ್ಯಾಂಶ ಏನೆಂಬುದು ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.

Facebook Comments