‘ಸರ್ಕಾರದಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿಯಿದ್ದರೆ ತನಿಖೆ ಮಾಡಿಸಿ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.14-ಸರ್ಕಾರದಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೆ ಅಧಿಕಾರದಲ್ಲಿದ್ದ ಮೋದಿ ಅವರ ಸರ್ಕಾರ ತನಿಖೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗ 10 ಪರ್ಸೆಂಟ್, 20 ಪರ್ಸೆಂಟ್ ಎಂದು ಆರೋಪ ಮಾಡುತ್ತಾರೆ.

ಆದರೆ ಕ್ರಮತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರ ಬಳಿ ಇತ್ತು. ಅದನ್ನು ಮಾಡಬಹುದಿತ್ತು. ಯಾವುದೇ ರೀತಿಯ ಆರೋಪಗಳಾದರೂ ತನಿಖೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅವಕಾಶವಿದೆ. ಜನರ ಮುಂದೆ ಸತ್ಯ ಹೇಳಲೂ ಸಹ ಅವಕಾಶ ಇದೆ. ಆದರೆ ರಾಜಕೀಯ ಕಾರಣಕ್ಕಾಗಿ ಚುನಾವಣೆ ವೇಳೆ ಸುಳ್ಳು ಆರೋಪ ಮಾಡಿ ಪ್ರಧಾನಿ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆದರಿಕೆ ಇದ್ದರೆ, ಭದ್ರತೆ ಪಡೆದುಕೊಳ್ಳಬಹುದು. ಚುನಾವಣಾ ಆಯೋಗದ ಮೂಲಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದರೆ, ಭದ್ರತೆ ಸಿಗುತ್ತದೆ. ಬೇಕಿದ್ದರೆ ಝಡ್++ ಭದ್ರತೆಯನ್ನೇ ತೆಗೆದುಕೊಳ್ಳಲಿ ಅದಕ್ಕೆ ನಾವ್ಯಾರು ಬೇಡವೆನ್ನುವುದಿಲ್ಲ ಎಂದರು.

ಆದಾಯ ತೆರಿಗೆ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ್ದನ್ನು ಸಮರ್ಥಿಸಿಕೊಂಡ ಪರಮೇಶ್ವರ್ ಅವರು, ಇಂತಹವರ ಮೇಲೆ ದಾಳಿ ಮಾಡಿ ಎಂದು ಬಿಜೆಪಿಯವರು ಪಟ್ಟಿ ಕೊಟ್ಟು ಕಳುಹಿಸಿದ ಮೇಲೆ ನಾವು ಏನು ಮಾಡಲು ಸಾಧ್ಯ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ ಪಟ್ಟಿಯಂತೆ ದಾಳಿ ಮಾಡುತ್ತಿರುವಾಗ, ಸಹಜವಾಗಿ ನಾವೂ ಕೂಡ ಪ್ರತಿಭಟನೆ ಮಾಡಬೇಕಿದೆ. ಕೇವಲ ಕಾಂಗ್ರೆಸ್-ಜೆಡಿಎಸ್ ಮುಖಂಡರು ಮತ್ತು ಬೆಂಬಲಿಗರ ಮನೆ ಮೇಲೆ ಏಕೆ ದಾಳಿ ನಡೆಯುತ್ತಿದೆ.

ಬಿಜೆಪಿಯವರ ಮನೆ ಮೇಲೆ ಏಕೆ ದಾಳಿಯಾಗುತ್ತಿಲ್ಲ. ಇದುವರೆಗೂ ಎಷ್ಟು ಜನ ಬಿಜೆಪಿಯವರ ಮನೆ ಮೇಲೆ ದಾಳಿ ನಡೆದಿದೆ ಎಂದು ಹೇಳಲಿ. ನಿಯಮಬದ್ಧವಾಗಿ ಇಲಾಖೆಗಳು ನಡೆಯದೆ ಇದ್ದಾಗ ನಾವು ಪ್ರತಿಭಟನೆ ನಡೆಸುವುದು ಸಹಜ. ಹಾಗಾಗಿಯೇ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ತಿರುಗೇಟು ನೀಡಿದರು.

Facebook Comments