ಎಸ್‍ಐಟಿಗೆ ತಲೆನೋವಾಗಿರುವ ಪರಶುರಾಮ್ ಹೇಳಿಕೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--012

ಬೆಂಗಳೂರು, ಜೂ.14-ಗೌರಿ ಲಂಕೇಶ್‍ಗೆ ಗುಂಡಿಟ್ಟವನು ನಾನೇ. ಆದರೆ ಹತ್ಯೆಗೆ ಬಳಸಿದ ಪಿಸ್ತೂಲು ಏನಾಯಿತು ಎಂದು ನನಗೆ ಗೊತ್ತಿಲ್ಲ. ಕೃತ್ಯಕ್ಕೆ ಸಹಕರಿಸಿದ ಬೈಕ್ ರೈಡರ್ ಯಾರು ಎಂಬ ಬಗ್ಗೆಯೂ ಮಾಹಿತಿ ಇಲ್ಲ-ಇದು ಗೌರಿ ಹಂತಕ ಪೊಲೀಸರಿಗೆ ನೀಡುತ್ತಿರುವ ಒಂದೇ ಉತ್ತರ. ಹಂತಕನ ಈ ಅಸ್ಪಷ್ಟ ಮಾಹಿತಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಸಿಂಧಗಿಯಲ್ಲಿ ಬಂಧಿಸಿ ಕರೆ ತರಲಾಗಿರುವ ಶಂಕಿತ ಹಂತಕ ಪರಶುರಾಮ್‍ನನ್ನು ಎಸ್‍ಐಟಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಅಗತ್ಯ ಸಾಕ್ಷ್ಯ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಿಚಾರಣೆ ಸಂದರ್ಭದಲ್ಲಿ ಅಸ್ಪಷ್ಟ ಮಾಹಿತಿ ನೀಡುತ್ತಾ ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ.

ಗೌರಿ ಲಂಕೇಶ್ ಅವರಿಗೆ ಗುಂಡಿಟ್ಟವನು ನಾನೇ. ನನಗೆ ಪಿಸ್ತೂಲು ನೀಡಿದ್ದು ಅಮೋಲ್ ಕಾಳೆ ಎಂಬಾತ ಎಂದಷ್ಟೇ ಹೇಳುವ ಹಂತಕ ಹತ್ಯೆ ನಂತರ ಪಿಸ್ತೂಲು ಏನಾಯಿತು. ನಿನ್ನನ್ನು ಬೈಕ್‍ನಲ್ಲಿ ಕರೆದೊಯ್ದವರು ಯಾರು ಎಂದರೆ ಅದು ನನಗೆ ಗೊತ್ತಿಲ್ಲ ಎನ್ನುತ್ತಿದ್ದಾನೆ. ಗೌರಿ ಹತ್ಯೆ ಮಾಡುವ ದಿನ ನನ್ನನ್ನು ಬೈಕ್‍ನಲ್ಲಿ ಕರೆದುಕೊಂಡು ಹೋದ ವ್ಯಕ್ತಿ ಯಾರು ಎಂದು ತಿಳಿದಿಲ್ಲ ಎನ್ನುವ ಪರಶುರಾಮ್ ರೈಡರ್‍ನ ಚಹರೆ ಮಾತ್ರ ವಿವರಿಸುತ್ತಾನೆ. ಹೋಗಲಿ ನಿಮಗೆ ಸಾಥ್ ನೀಡಿದ ಬೇರೆ ಬೈಕ್ ಸವಾರರ ವಿವರ ನೀಡು ಎಂದರೆ ಅದು ಕೂಡ ನನಗೆ ತಿಳಿದಿಲ್ಲ ಎನ್ನುತ್ತಾನೆ.

ನನ್ನನ್ನು ಕರೆದೊಯ್ದ ಬೈಕ್ ರೈಡರ್ ಮತ್ತು ನನಗೆ ಸಾಥ್ ನೀಡಿದ ಬೈಕ್ ಸವಾರರು ಬರೀ ಕೋಡ್ ವರ್ಡ್‍ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಅವರು ಯಾರು, ಅವರುಗಳ ಹೆಸರುಗಳೇನು, ಅವರ ಉದ್ಯೋಗವೇನು ಎಂಬ ಬಗ್ಗೆ ಏನು ಗೊತ್ತಿಲ್ಲ ಎನ್ನುತ್ತಿದ್ದಾನೆ ಆರೋಪಿ.ಗೌರಿ ಅವರ ಮೇಲೆ ಗುಂಡು ಹಾರಿಸಿದ ನಂತರ ಪಿಸ್ತೂಲನ್ನು ನನ್ನನ್ನು ಬೈಕ್‍ನಲ್ಲಿ ಕರೆದೊಯ್ದ ರೈಡರ್‍ಗೆ ನೀಡಿದ್ದೇನೆ ಎನ್ನುವ ಹೇಳಿಕೆ ನೀಡುತ್ತಾ ಪೊಲೀಸರ ತನಿಖೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪರಶುರಾಮನ ಈ ಅಸ್ಪಷ್ಟ ಮಾಹಿತಿ ಪೊಲೀಸರಿಗೆ ತಲೆ ನೋವು ತರಿಸಿದೆ. ಗೌರಿ ಹಂತಕರ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಬೇಕಾದರೆ ಕೃತ್ಯಕ್ಕೆ ಬಳಸಿದ ಪಿಸ್ತೂಲು , ಬೈಕ್ ಮತ್ತು ಬೈಕ್ ರೈಡರ್‍ನ ಸುಳಿವಿನ ಅಗತ್ಯವಿದೆ. ಗೌರಿ ಹತ್ಯೆಗೆ ಬಳಸಲಾದ ಗುಂಡಿನ ಕಾಟ್ರ್ರೆಜ್ ಪೊಲೀಸರಿಗೆ ಸಿಕ್ಕಿದ್ದು ಅದು ಯಾವ ಪಿಸ್ತೂಲಿನಿಂದ ಹಾರಿದ ಗುಂಡು ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾದರೆ ಪಿಸ್ತೂಲು ಮತ್ತು ಕಾಟ್ರ್ರೆಜ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗಿದೆ.

ಆದರೆ ಹಂತಕ ಪಿಸ್ತೂಲು ಮತ್ತು ಕೃತ್ಯ ನಡೆದ ನಂತರ ನಾಪತ್ತೆಯಾಗಿರುವ ಬೈಕ್ ಹಾಗೂ ಸವಾರನ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಪೊಲೀಸರು ವಿಭಿನ್ನ ಕೋನಗಳಿಂದ ಹಂತಕನಿಂದ ಸತ್ಯ ಬಾಯಿ ಬಿಡಿಸಲು ಹರಸಾಹಸ ಪಡುವಂತಾಗಿದೆ.ಎಫ್‍ಎಸ್‍ಎಲ್‍ಗೆ ರವಾನೆ: ಗೌರಿ ಲಂಕೇಶ್ ಅವರ ಹತ್ಯೆ ಸಂದರ್ಭದಲ್ಲಿ ಅವರ ನಿವಾಸದ ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಳ್ಳಲಾದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಹಂತಕರ ಅಸ್ಪಷ್ಟ ಚಿತ್ರಣ ಹಾಗೂ ಬಂಧಿತನಾಗಿರುವ ಹಂತಕನ ಛಾಯಾಚಿತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿರುವ ಪೊಲೀಸರು ಹಂತಕನಿಗೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರಣಕ್ಕೂ ಹೋಲಿಕೆ ಇದೆಯೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.9 ತಿಂಗಳ ನಂತರ ಗೌರಿ ಹಂತಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ ಹಂತಕನಿಂದ ಸ್ಪಷ್ಟ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದೆ ಪೊಲೀಸರು ಪರಿತಪಿಸುವಂತಾಗಿದೆ.

Facebook Comments

Sri Raghav

Admin