ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ:ವಿದ್ಯಾರ್ಥಿಗಳಿಗೆ ಮೋದಿ ಮೇಷ್ಟ್ರು ಪಾಠ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.20-ಪರೀಕ್ಷೆಯನ್ನು ಹಬ್ಬದಂತೆ ಸಡಗರದಿಂದ ಎದುರಿಸಿ ಜಯಶೀಲರಾಗಿ, ಸಂಭ್ರಮಿಸಿ ಎಂದು ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಒತ್ತಡ ಸಹಜ. ಆದರೆ ಈ ಒತ್ತಡವನ್ನು ಬದಿಗೊತ್ತಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಯಶಸ್ಸು ಸಾಧಿಸುವಂತೆ ಅವರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರೀತಿಪೂರ್ವಕ ಸಲಹೆ ನೀಡಿದರು.

ದೆಹಲಿಯ ತಲ್ಕತೋರ ಕ್ರೀಡಾಂಗಣದಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಮೈ ಗೌರ್ನಮೆಂಟ್ ಜಂಟಿಯಾಗಿ ಆಯೋಜಿಸಿದ್ದ 3ನೇ ವರ್ಷದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ 2,000 ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು. ಪೋಷಕರು ತಮ್ಮ ಮಕ್ಕಳಲ್ಲಿ ಓದಿನ ಬಗ್ಗೆ ಸ್ವಯಂ ಆಸಕ್ತಿ ಮೂಡಿಸಬೇಕೇ ಹೊರತು ಅವರ ಮೇಲೆ ಒತ್ತಡ ಹೇರಿ ಗೊಂದಲ ಸೃಷ್ಟಿಸಬಾರದು ಎಂದು ಇದೇ ಸಂದರ್ಭದಲ್ಲಿ ಮೋದಿ ಕಿವಿಮಾತು ಹೇಳಿದರು.

ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸಿ ಸಫಲರಾಗುವಂತೆ ಆಲ್ ದಿ ಬೆಸ್ಟ್ ಶುಭ ಕೋರಿದ ಪ್ರಧಾನಿ ಮೋದಿ, ಎಲ್ಲಾ ವಿದ್ಯಾರ್ಥಿ ಜೀವನದಲ್ಲೂ ಪರೀಕ್ಷೆ ಎಂಬುದು ಒಂದು ಮಹತ್ವದ ಘಟ್ಟ. ಇದು ನಿಮ್ಮನ್ನು ಹೆದರಿಸಲು ಬರುವುದಲ್ಲ. ಬದಲಿಗೆ ನಿಮ್ಮ ಮುಂದಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ಒಂದು ಶೈಕ್ಷಣಿಕ ಮಾನದಂಡವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಗೆ ಭಯಭೀತಿ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರಶಾಂತ ಚಿತ್ತರಾಗಿ ಪರೀಕ್ಷೆಯನ್ನು ಎದುರಿಸಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮೋದಿ ವ್ಯಾಖ್ಯಾನಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ 2020ರ ಹೊಸ ವರ್ಷದ ಶುಭ ಕೋರಿದ ಮೋದಿ, ಇದು ಹೊಸ ದಶಕದ ಆರಂಭ. 2020ವಿದ್ಯಾರ್ಥಿಗಳು, ಯುವಜನಾಂಗ ಮತ್ತು ಭಾರತಕ್ಕೆ ಅತ್ಯಂತ ಮಹತ್ವದ್ದು ಎಂದು ಹೇಳಿದರು. ಭಾರತದ ಭವ್ಯ ಭವಿಷ್ಯವು ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ಅವಲಂಬಿತವಾಗಿದೆ. ನಿಮ್ಮ ಹೊಸ ಪರಿಕಲ್ಪನೆಯಿಂದ ನಮ್ಮ ದೇಶದ ಭವಿತವ್ಯ ಉಜ್ವಲವಾಗಬಲ್ಲದು ಎಂದು ಮೋದಿ ಪ್ರೇರಣೆ ತುಂಬಿದ ಮಾತುಗಳನ್ನಾಡಿದರು.

ಪರೀಕ್ಷೆಗೆ ಯಾವ ರೀತಿ ಸರಳವಾಗಿ ಸಜ್ಜಾಗಬೇಕೆಂಬ ಬಗ್ಗೆ ಟಿಪ್ಸ್‍ಗಳನ್ನು ನೀಡುತ್ತಾ, ಅತ್ಯಂತ ಲವಲವಿಕೆಯಿಂದ ಮಾತನಾಡಿದ ಮೋದಿ, ತಮ್ಮ ಮಾತಿನ ಮಧ್ಯೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ವಿದ್ಯಾರ್ಥಿ ಸಮುದಾಯವನ್ನು ರಂಜಿಸಿದರು. ಹಿರಿಯ ಮುಖ್ಯೋಪಾಧ್ಯಾಯರಂತೆ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಮೋದಿ, ನೀವು ನನ್ನೊಂದಿಗೆ ಯಾವುದೇ ಫಿಲ್ಟರ್ ಇಲ್ಲದೆ ಸಂವಾದ ನಡೆಸಬೇಕು ಎಂದು ಸಲಹೆ ಮಾಡಿದರು.

ತಂತ್ರಜ್ಞಾನವನ್ನು ನಮ್ಮ ಕೈಯಲ್ಲಿ ಸಾಮಥ್ರ್ಯವನ್ನು ನಾವು ರೂಢಿಸಿಕೊಳ್ಳಬೇಕು. ತಂತ್ರಜ್ಞಾನ ನಮಗೆ ಉಪಯೋಗವಾಗಬೇಕೇ ಹೊರತು ಅದರಿಂದ ಕಾಲ ವ್ಯರ್ಥವಾಗಬಾರದು ಎಂದು ಇತ್ತೀಚೆಗೆ ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಗ್ಯಾಜೆಟ್‍ಗಳ ಬಳಕೆಯನ್ನು ಉದಾಹರಣೆಯಾಗಿ ಹೇಳಿದರು. ನಮ್ಮ ಮನೆಗಳಲ್ಲಿ ಒಂದು ಕೊಠಡಿ ತಂತ್ರಜ್ಞಾನ ಮುಕ್ತವಾಗಿರಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಯಾವುದೇ ಬಾಹ್ಯ ಪರಿಣಾಮಕ್ಕೆ ಅವಕಾಶವಿಲ್ಲದಂತೆ ಏಕಾಗ್ರತೆಯಿಂದ ಓದಿನ ಕಡೆ ಗಮನಹರಿಸಲು ಸಹಕಾರಿಯಾಗುತ್ತದೆ ಎಂದರು.

ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಬೇಕು ನಿಜ. ಆದರೆ ಇದೇ ಎಲ್ಲವೂ ಅಲ್ಲ. ಜೀವನದಲ್ಲಿ ನಾವು ಹತ್ತು ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದು ಸಲಹೆ ಮಾಡಿದರು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳಲ್ಲದೆ, ಅವರ ಪೋಷಕರೂ ಕೂಡ ವಿನಾಕಾರಣ ಒತ್ತಡಕ್ಕೊಳಗಾಗುತ್ತಾರೆ. ಈ ಒತ್ತಡವು ಸಹಜ. ಆದರೆ ಇದು ತಮ್ಮ ಮಕ್ಕಳ ವ್ಯಾಸಂಗ ಮೇಲೆ ದುಷ್ಪರಿಣಾಮ ಬೀರಬಾರದು. ಈ ಮಾತು ಇಲ್ಲಿರುವ ಶಿಕ್ಷಕ ಸಮುದಾಯಕ್ಕೂ ಅನ್ವಯಿಸುತ್ತದೆ.

ಬಾಹ್ಯ ವಿಷಯಗಳು ವಿದ್ಯಾರ್ಥಿಗಳಿಗೆ ಕೆಟ್ಟ ಪರಿಣಾಮ ಬೀರುತ್ತವೆ. ಅದರಿಂದ ದೂರವಿರಬೇಕು. ಅತಿಯಾದ ಆತ್ಮವಿಶ್ವಾಸ ಕೂಡ ಸರಿಯಲ್ಲ. ಅದೂ ಕೂಡ ತಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡುತ್ತದೆ. ಶ್ರದ್ಧೆ, ಏಕಾಗ್ರತೆಯಿಂದ ಕಲಿತು ಭವ್ಯ ಭಾರತದ ಪ್ರಜೆಗಳಾಗಿ ಹಿಂದೂಸ್ತಾನದ ಕೀರ್ತಿಯನ್ನು ಬೆಳಗಿಸಲು ಸಂಕಲ್ಪ ತೊಡಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೆÇಕ್ರಿಯಾಲ್ ನಿಶಾಂಕ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಪರೀಕ್ಷಾ ಪೇ ಚರ್ಚಾ ಯಶಸ್ವಿಯಾಗುತ್ತಿದೆ. ದೇಶ-ವಿದೇಶಗಳ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದ ಈ ಕಾರ್ಯಕ್ರಮ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

9ನೇ ತರಗತಿಯಿಂದ 12ನೇ ತರಗತಿಯವರೆಗಿನ 2 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆ ಮೂಲಕ 1050 ವಿದ್ಯಾರ್ಥಿಗಳನ್ನುಆಯ್ಕೆ ಮಾಡಲಾಗಿತ್ತು. 50 ಮಂದಿ ದಿವ್ಯಾಂಗ ಮಕ್ಕಳು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿಶೇಷ ಗಮನಸೆಳೆದರು.

Facebook Comments