ಇಂದು ಸಂಜೆ ಪ್ರಧಾನಿ ‘ಪರೀಕ್ಷಾ ಪೇ ಚರ್ಚೆ’
ನವದೆಹಲಿ, ಏ.7- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಪರೀಕ್ಷಾ ಪೇ ಚರ್ಚೆ ಇಂದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ರಾಷ್ಟ್ರೀಯ ದೂರದರ್ಶನ ಹಿಂದಿ ಭಾಷೆಯಲ್ಲಿ 7 ಗಂಟೆಗೆ ಪ್ರಧಾನಮಂತ್ರಿಯವರ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಯ ದೂರದರ್ಶನ ಪ್ರಾದೇಶಿಕ ಕೇಂದ್ರಗಳಲ್ಲೂ ಕೂಡ ಪ್ರಸಾರವಾಗಲಿದೆ.
ಪರೀಕ್ಷೆಯ ಆತಂಕದಿಂದ ಗೊಂದಲಕ್ಕೊಳಗಾಗಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚೆಯನ್ನು ಆರಂಭಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಪಾಲ್ಗೊಳ್ಳುತ್ತಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ತಮ್ಮಲ್ಲಿರುವ ಗೊಂದಲಗಳನ್ನು ಹೇಳಿಕೊಳ್ಳಲಿದ್ದಾರೆ.
ಪ್ರಧಾನಮಂತ್ರಿ ಅವರು ಅದಕ್ಕೆ ಪರಿಹಾರ ಹೇಳಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಲಿದ್ದಾರೆ. ಈ ಕಾರ್ಯಕ್ರಮ ಮನ್ ಕಿ ಬಾತ್ ಮಾದರಿಯಲ್ಲೇ ಅತಿ ಹೆಚ್ಚು ಜನಪ್ರಿಯವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗೆ ಕಾರಣವಾಗಿದೆ.