ವಿಧಾನ ಪರಿಷತ್ ಸದಸ್ಯರ ವಾಹನಗಳ ಅನಧಿಕೃತ ನಾಮಫಲಕ ತೆರವಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.27- ವಿಧಾನ ಪರಿಷತ್ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ಅಳವಡಿಸಿರುವ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸುವಂತೆ ವಿಧಾನಪರಿಷತ್ ಸಚಿವಾಲಯ ಮನವಿ ಮಾಡಿದೆ.  ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಕೇಂದ್ರ ಮೋಟಾರು ವಾಹನಗಳ ನಿಯಮ 59 ಮತ್ತು 51 ಹಾಗೂ ಎಂಬ್ಲೆಮ್ಸ್ ಅಂಡ್ ನೇಮ್ಸ್ ಆಕ್ಟ್ 1950 ಕಲಂ 3, 4 ಮತ್ತು 5ರ ಅನ್ವಯ ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಹೆಸರುಗಳು, ಚಿಹ್ನೆ, ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥಗಳ ಹೆಸರುಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರವಾಗಿದೆ.

ಅಂತಹ ಫಲಕಗಳನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆಯು ಪ್ರಕಟಣೆ ನೀಡಿತ್ತು. ಆದರೂ ಆ ರೀತಿಯ ಅನಧಿಕೃತ ನೋಂದಣಿ ಫಲಕಗಳನ್ನು ಪ್ರದರ್ಶಿಸಿಕೊಂಡು ರಸ್ತೆಯಲ್ಲಿ ಓಡಾಡುವಂತ ವಾಹನಗಳನ್ನು ಗಮನಿಸಿರುವ ಕರ್ನಾಟಕ ಹೈಕೋರ್ಟ್, ಪ್ರಕರಣ ಸಂಖ್ಯೆ ಸಿಆರ್‍ಎಲ್‍ಪಿ ಸಂಖ್ಯೆ 1850/2017ರ ವಿಚಾರಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿಹ್ನೆ, ಲಾಂಛನ ಹಾಗೂ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದನ್ನು ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಭಾಪತಿಯವರನ್ನು ಕೊರಿದೆ.

ಹಾಗಾಗಿ ಸದಸ್ಯರು ತಮ್ಮ ಖಾಸಗಿ ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಹೆಸರು, ಚಿಹ್ನೆ, ಹೆಸರುಗಳನ್ನು ಹಾಕದಂತೆ, ಈಗಾಗಲೇ ಹಾಕಿದ್ದರೆ ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.

Facebook Comments