ಮೇಲ್ಮನೆಯಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾದ ಸದಸ್ಯರಿಗೆ ಅಮಾನತು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29- ಕಳೆದ ತಿಂಗಳು ನಡೆದ ಒಂದು ದಿನದ ವಿಧಾನಪರಿಷತ್ ವಿಶೇಷ ಅಧಿವೇಶನದಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾದ ಸಚಿವರನ್ನು ವಜಾಗೊಳಿಸಬೇಕು, ಮೂರು ಪಕ್ಷಗಳ ಸದಸ್ಯರನ್ನು ಹಂತ ಹಂತವಾಗಿ ಒಂದು ಮತ್ತು ಎರಡು ಅಧಿವೇಶನಗಳಿಂದ ಅಮಾನತುಗೊಳಿಸಬೇಕೆಂದು ಸದನ ಸಲಹಾ ಸಮಿತಿ ಶಿಫಾರಸು ಮಾಡಿದೆ. ಜತೆಗೆ ವಿಧಾನಪರಿಷತ್‍ನ ಕಾರ್ಯದರ್ಶಿ ವಿರುದ್ಧ ಇಲಾಖಾ ವಿಚಾರಣೆಗೆ ಸಲಹೆ ನೀಡಲಾಗಿದೆ.

ಡಿ.15ರಂದು ನಡೆದ ವಿಧಾನಪರಿಷತ್ ಕಲಾಪದಲ್ಲಿ ಭಾರೀ ಗದ್ದಲ ಕೋಲಾಹಲ ನಡೆದಿತ್ತು. ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನ ಸದನದ ಒಳಗೆ ಬರದಂತೆ ತಡೆಯಲಾಗಿತ್ತು. ಸಭಾಪತಿ ಪೀಠದಲ್ಲಿ ಉಪ ಸಭಾಪತಿ ಧರ್ಮೇಗೌಡ ಅವರನ್ನು ಕೂರಿಸಲಾಗಿತ್ತು. ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಸದಸ್ಯರು ಪ್ರಯತ್ನಿಸಿದ್ದರು. ಅವರನ್ನು ರಕ್ಷಿಸಲು ಜೆಡಿಎಸ್ ಸದಸ್ಯರು ಪ್ರಯತ್ನ ಮಾಡಿದ್ದರು.

ಈ ಸಮಯದಲ್ಲಿ ತಳ್ಳಾಟ, ನೂಕಾಟ, ಗಲಾಟೆ, ಗದ್ದಲಗಳು ಆಗಿದ್ದವು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ದೂರು ನೀಡಿದ್ದರು. ಘಟನೆಯ ತನಿಖೆಗಾಗಿ ಸಭಾಪತಿಯವರು ಐವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದ್ದರು. ಅದರಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ ಅಧ್ಯಕ್ಷರಾಗಿದ್ದರು. ಬಿಜೆಪಿಯ ಎಚ್.ವಿಶ್ವನಾಥ್ ಮತ್ತು ಎಸ್.ವಿ.ಸಂಕನೂರ ಅವರು ಸಮಿತಿಯನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್, ಆರ್.ಬಿ.ತಿಮ್ಮಾಪುರ್ ಸದಸ್ಯರಾಗಿ ಮುಂದುವರೆದರೆ, ಜೆಡಿಎಸ್‍ನ ಮರಿತಿಬ್ಬೇಗೌಡ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಅಂತಿಮ ವರದಿ ನೀಡಲು ಮೂರು ತಿಂಗಳ ಕಾಲಾವಕಾಶ ಕೇಳಿದ್ದು, ಅದಕ್ಕೆ ಸಭಾಪತಿಯವರು ಸಹಮತ ವ್ಯಕ್ತಪಡಿಸಿದ್ದಾರೆ. ಇಂದು ವಿಧಾನಪರಿಷತ್‍ನಲ್ಲಿ ಮಂಡಿಸಲಾದ ಮಧ್ಯಂತರ ವರದಿಯಲ್ಲಿ ವಿಧಾನಪರಿಷತ್‍ನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ನಿಯಮ ಬಾಹಿರವಾಗಿ ನಡೆದುಕೊಂಡಿದ್ದು, ಸದನದ ನಿಂದನೆ ಮಾಡಿದ್ದಾರೆ. ಸಮಿತಿ ಅಂತಿಮ ವರದಿ ಸಲ್ಲಿಸುವವರೆಗೂ ಅವರು ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ನಿರ್ಬಂಧಿಸಬೇಕು ಅವರ ವಿರುದ್ಧ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖೆ ವಿಚಾರಣೆ ನಡೆಸಬೇಕೆಂದು ಶಿಫಾರಸು ಮಾಡಲಾಗಿದೆ.

ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರು ಮೃತಪಟ್ಟಿರುವುದರಿಂದ ಅವರ ಮೇಲಿನ ವಿಚಾರಣೆಯನ್ನು ಕೈ ಬಿಡಲಾಗಿದೆ. ಉಳಿದಂತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಭಾನಾಯಕರು ಮತ್ತು ಸಚಿವರೂ ಆಗಿರುವ ಕೋಟಾ ಶ್ರೀನಿವಾಸಪೂಜಾರಿ ಅವರುಗಳು ಘಟನೆಗೆ ಕುಮ್ಮಕ್ಕು ನೀಡಿದ್ದು, ನೇರವಾಗಿ ಭಾಗೀದಾರರಾಗಿದ್ದಾರೆ.

ಹಾಗಾಗಿ ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಿಸಲು ಸೂಕ್ತವಲ್ಲ ಎಂದು ಶಿಫಾರಸು ಮಾಡಲಾಗಿದ್ದು, ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಎರಡು ಅವಧಿಯ ಅಧಿವೇಶನದ ಕಾರ್ಯಕಲಾಪಗಳಿಂದ ಅಮಾನತು ಮಾಡಲು ಸಲಹೆ ನೀಡಲಾಗಿದೆ.

ಸಭಾಪತಿಯವರು ಪ್ರವೇಶಿಸುವ ದ್ವಾರವನ್ನು ಮುಚ್ಚುವ ಮೂಲಕ ಕಾನೂನು ಬಾಹೀರ ನಡವಳಿಕೆಗಳನ್ನು ಪ್ರದರ್ಶಿಸಿದ ಇಂದು ನೂತನವಾಗಿ ಆಯ್ಕೆಯಾದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿದಂತೆ ಬಿಜೆಪಿ ಯ ಇತರ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅರುಣ್ ಶಹಪುರ ಅವರನ್ನು ಮುಂದಿನ ಎರಡು ಅಧಿವೇಶನಗಳ ಅವಧಿಗೆ, ಸಭಾಪತಿ ಪೀಠದ ಮೇಲೆ ಕುಳಿತಿದ್ದ ಚಂದ್ರಶೇಖರ್ ಪಾಟೀಲ್ ಅವರನ್ನು ಮತ್ತು ಸಭಾಪತಿ ಪೀಠದ ಬಳಿ ನಿಂತು ಗಲಾಟೆ ಮಾಡಿದ ಕಾಂಗ್ರೆಸ್ ಎಂ.ನಜೀರ್ ಅಹಮ್ಮದ್, ಎಂ.ನಾರಾಯಣಸ್ವಾಮಿ, ಶ್ರೀನಿವಾಸ್ ವಿ ಮಾನೆ, ಪ್ರಕಾಶ್ ಕೆ.ರಾಥೋಡ್ ಅವರನ್ನು ಒಂದು ಅಧಿವೇಶನ ಅವಧಿಗೆ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ.

ಜೆಡಿಎಸ್‍ನ ಬಸವರಾಜಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್‍ನ ಗೋವಿಂದರಾಜ್ ಅವರುಗಳನ್ನು ಮುಂದಿನ ಎರಡು ಅಧಿವೇಶನಗಳ ಅವಧಿಗೆ ಅಮನತುಗೊಳಿಸಲು ಸಲಹೆ ನೀಡಲಾಗಿದೆ.  ವರದಿಯಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಉಲ್ಲೇಖಿಸಲಾಗಿದೆ. ಅದಕ್ಕೆ ಪೂರಕವಾಗಿ ಸಿಡಿಗಳನ್ನು ಒದಗಿಸಲಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಪೆÇಲೀಸ್ ಮಾರ್ಷೆಲ್‍ಗಳು, ಸಚಿವಾಲಯದ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆತ್ಮಹತ್ಯೆಮಾಡಿಕೊಂಡಿರುವ ಧರ್ಮೇಗೌಡ ಅವರು ಬರೆದಿಟ್ಟಿರುವ ಮರಣೋತ್ತರ ಪತ್ರವನ್ನು ಹಾಜರುಪಡಿಸುವಂತೆಯೂ ಸಮಿತಿ ಸರ್ಕಾರಕ್ಕೆ ಸೂಚನೆ ನೀಡಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ ನೂತನ ಉಪಸಭಾಪತಿ ಪ್ರಾಣೇಶ್ ಅವರು ಕೂಡ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇಂದು ಸಮಿತಿಯ ಅಧ್ಯಕ್ಷ ಮರಿತಿಬ್ಬೇಗೌಡ ಅವರು ಕಲಾಪದಲ್ಲಿ ವರದಿಯನ್ನು ಮಂಡನೆ ಮಾಡಿದರು.

ವರದಿಯ ಮೇಲಿನ ಚರ್ಚೆಗೆ ಸರ್ಕಾರ ಸಿದ್ದವಿದೆ. ಆದರೆ, ಅದನ್ನು ಓದಬೇಕು. ಹಾಗಾಗಿ ಮುಂದೊಂದು ದಿನ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಸಲಹೆ ನೀಡಿದರು. ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಇದು ಮಧ್ಯಂತರ ವರದಿ, ಹೀಗಾಗಿ ಚರ್ಚೆಯ ಅಗತ್ಯವಿಲ್ಲ. ಅಂತಿಮ ವರದಿ ಬಂದ ಬಳಿಕ ಚರ್ಚೆ ನಡೆಯಲಿ ಎಂದು ಸಲಹೆ ನೀಡಿದರು.

ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಮಧ್ಯಂತರ ವರದಿ ಮೇಲೆ ಚರ್ಚೆಗೆ ಅವಕಾಶ ನೀಡುವುದು ಅರ್ಥ ಏನಾಗುತ್ತದೆ. ಪೂರ್ಣ ವರದಿ ಇಲ್ಲವೇ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮಧ್ಯಂತರ ವರದಿ ಸದನದಲ್ಲಿ ಮಂಡನೆಯಾಗಿದೆ ಎಂದು ಹೇಳುವ ಮೂಲಕ ಚರ್ಚೆಗೆ ನಾಂದಿ ಹಾಡಿದರು.

Facebook Comments