ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.20- ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕೃತವಾದ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತದೆ ಎಂಬ ಕಾರಣಕ್ಕೆ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಜ್ಜಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಪರಿಷತ್‍ಗೆ ಹೊಸ ಸಭಾಪತಿ ಆಯ್ಕೆ ಮಾಡಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.

ಉಭಯ ಪಕ್ಷಗಳ ನಡುವೆ ಮೈತ್ರಿಯಾದರೆ, ಬಿಜೆಪಿಗೆ ಸಭಾಪತಿ ಹಾಗೂ ಜೆಡಿಎಸ್‍ಗೆ ಉಪಸಭಾಪತಿ ಸ್ಥಾನ ಹಂಚಿಕೆಯಾಗಲಿದೆ. ಡಿಸೆಂಬರ್ 7 ರಿಂದ 15 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ ತಯಾರಿ ಕೂಡ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪರಿಷತ್‍ನಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆಡಳಿತಾರೂಢ ಬಿಜೆಪಿ, ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಸಾಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೂಲಕ ಪಲ್ಲಟಗೊಳಿಸಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಮೇಲ್ಮನೆಯಲ್ಲಿ ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆಗಳಿದ್ದು, ಇದಕ್ಕಾಗಿ ತೆರೆಮರೆಯಲ್ಲಿ ವೇದಿಕೆ ಸಿದ್ದವಾಗುತ್ತಿದೆ.

ಸದ್ಯ, ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್‍ನ ಪ್ರತಾಪ್‍ಚಂದ್ರ ಶೆಟ್ಟಿ ಸಭಾಪತಿ ಸ್ಥಾನದಲ್ಲಿದ್ಧಾರೆ. ಜೆಡಿಎಸ್‍ನ ಧರ್ಮೇಗೌಡ ಉಪಸಭಾಪತಿ ಆಗಿದ್ದಾರೆ. ಸಭಾಪತಿ ಸ್ಥಾನಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕೂರಿಸುವುದು ಬಿಜೆಪಿ ಉದ್ದೇಶ ಎನ್ನಲಾಗುತ್ತಿದೆ. ಬಿಜೆಪಿ ಸರ್ಕಾರದ ಉದ್ದೇಶಿತ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ. ಸಭಾಪತಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷವನ್ನು ಸಂಪರ್ಕಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯಿದೆ, ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಕೈಗಾರಿಕಾ ಮಸೂದೆ, ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ. ಆದರೆ ಪರಿಷತ್‍ನಲ್ಲಿ ವಿಫಲವಾಗಿವೆ. ವಿಧಾನ ಪರಿಷತ್‍ನಲ್ಲಿದ್ದ 40 ಸದಸ್ಯರಿದ್ದ ಕಾರಣ, ಕೈಗಾರಿಕಾ ಮಸೂದೆಯನ್ನು ಮತಕ್ಕೆ ಹಾಕಲಾಗಿತ್ತು.

ಮಸೂದೆ ಪರವಾಗಿ 14 ಮತಗಳು ಹಾಗೂ ಮಸೂದೆ ವಿರೋಧಿಸಿ ಜೆಡಿಎಸ್ ಸದಸ್ಯರು ಸೇರಿದಂತೆ ಒಟ್ಟು 26 ಸದಸ್ಯರು ವಿರೋಧವಾಗಿ ಮತ ಚಲಾಯಿಸಿದ್ದರು. ಮಧ್ಯರಾತ್ರಿ 1 ಗಂಟೆವರೆಗೂ ಚರ್ಚೆ ನಡೆದಿತ್ತು.  ಮಸೂದೆ ಪಾಸ್ ಮಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಗೆ ಉಪಸಭಾಪತಿ ಸ್ಥಾನ ನೀಡಲು ಬಿಜೆಪಿ ಸಿದ್ಧವಿದೆ ಎಂದು ಹೇಳಲಾಗುತ್ತಿದೆ.

ಅಧ್ಯಕ್ಷರ ಅಧಿಕಾರಾವಧಿ ಮುಗಿಯುವ ಮೊದಲು ಹೊಸ ಅಧ್ಯಕ್ಷ ಅಥವಾ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಬಿಜೆಪಿ ಮಾಡಬೇಕಾದರೇ ಬಿಜೆಪಿಗೆ ಬಹುಮತ ಇರಬೇಕು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಗೆ ಅಗತ್ಯ ಸಂಖ್ಯೆ ಸಿಗುತ್ತದೆ. ಇತ್ತೀಚೆಗೆ ನಡೆದ ವಿಧಾನಪರಿಷತ್‍ನ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ನಾಲ್ಕೂ ಸ್ಥಾನಗಳನ್ನ ಗೆದ್ದು ಸಂಖ್ಯಾಬಲ ವೃದ್ಧಿಸಿಕೊಂಡಿತ್ತು. ಅದರಂತೆ ಪರಿಷತ್‍ನಲ್ಲಿ ಬಿಜೆಪಿ 31, ಕಾಂಗ್ರೆಸ್ 29, ಜೆಡಿಎಸ್ 14 ಸದಸ್ಯರನ್ನು ಹೊಂದಿವೆ. ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ಅಧಿಕ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನವನ್ನು ಪಡೆಯಲು ಬಿಜೆಪಿ ಹೊರಟಿದೆ.ಸಂಪುಟ ಪುನಾರಚನೆ ಆದಾಗ ಒಂದು ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಹೀಗಾದಲ್ಲಿ ಅವರನ್ನು ಸಭಾಪತಿ ಸ್ಥಾನ ನೀಡುವ ಯೋಜನೆ ಬಿಜೆಪಿಯದ್ದಾಗಿದೆ. ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಬಗ್ಗೆ ಪೂಜಾರಿ ಕೂಡ ಮಾನಸಿಕವಾಗಿ ಸಿದ್ಧವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಲಿ ಪರಿಷತ್ ಸಭಾಪತಿಯಾಗಿ ಪ್ರತಾಪ್‍ಚಂದ್ರ ಶೆಟ್ಟಿ ಅವರನ್ನು ನೇಮಿಸಲಾಗಿತ್ತು. ಹೀಗಾಗಿ ಸಭಾಪತಿಗಳು ಕಾಂಗ್ರೆಸ್ ಪರವಾಗಿದ್ದರಿಂದಲೇ ಮಸೂದೆ ಪಾಸು ಮಾಡಲು ಅವಕಾಶ ನೀಡಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಬಾರಿಯ ಚಳಿಗಾಲದ ಅಧಿವೇಶನ ಡಿ.7ರಿಂದ 15ರವರೆಗೆ ನಡೆಯಲಿದೆ.

 

Facebook Comments