ವಾಹನ ಖರೀದಿಸುವ ತವಕದಲ್ಲಿದ್ದ ಬೆಂಗಳೂರಿಗರಿಗೆ ಬಿಗ್ ಶಾಕ್..!
ಬೆಂಗಳೂರು,ಡಿ.1- ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ ನಿವಾರಣೆ ಉದ್ದೇಶದಿಂದರಾಜ್ಯ ಸರ್ಕಾರ ಇನ್ನು ಮುಂದೆ ವಾಹನ ಖರೀದಿಗೆ ಕಡ್ಡಾಯವಾಗಿ ಬದ್ಧತಾ ಪತ್ರ (ಕಮಿಟ್ಮೆಂಟ್ ಲೆಟರ್) ಪಡೆಯಲೇಬೇಕೆಂಬ ನಿಯಮವನ್ನು ಜಾರಿ ಮಾಡಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಪಾರ್ಕಿಂಗ್ ಶುಲ್ಕ ನೀತಿ ಅನುಷ್ಠಾನ ಕುರಿತ ಸಭೆಯಲ್ಲಿ ಮಾಲೀಕರು ವಾಹನಗಳನ್ನು ಖರೀದಿ ಮಾಡುವ ಮುನ್ನ ಕಡ್ಡಾಯವಾಗಿ ನಾನು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂಬ ಬದ್ಧತಾ ಪತ್ರಕ್ಕೆ ಕಡ್ಡಾಯವಾಗಿ ಸಹಿ ಹಾಕಲೇಬೇಕು. ಆಗಿದ್ದರೆ ಮಾತ್ರ ವಾಹನ ಖರೀದಿಸಲು ಅವಕಾಶ ನೀಡಲಾಗುತ್ತದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ನಗರದಲ್ಲಿ ಸಂಚಾರಿ ದಟ್ಟಣೆ ಜತೆಗೆ ಪಾರ್ಕಿಂಗ್ ವ್ಯವಸ್ಥೆ ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಸಿದ್ದು, ಹೊಸ ವಾಹನ ಖರೀದಿದಾರರು ಮನೆಯ ಒಳಗಡೆ ಪಾರ್ಕಿಂಗ್ ಮಾಡುವ ಕುರಿತು ಕಮಿಟ್ಮೆಂಟ್ ಪತ್ರ ನೀಡಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದೆ. ಇಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕೆಲವು ಕಡೆ ರಸ್ತೆಯಲ್ಲೇ ಪಾರ್ಕಿಂಗ್ ಮಾಡಬೇಕಾದ ಪರಿಸ್ಥಿತಿ ಇದೆ. ಜನರಿಗೆ ತೊಂದರೆಯಾದರೂ ಸರಿ ಅನಿವಾರ್ಯವಾಗಿ ಕೆಲವು ಬಿಗಿಯಾದ ನಿಗಮಗಳನ್ನು ಜಾರಿ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಆನ್ರೋಡ್ ಪಾರ್ಕಿಂಗ್ಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಕೆಲವು ಕಡೆ ಮನೆ ಮುಂದೆ ಹಾಗೂ ರಸ್ತೆಯ ಅಕ್ಕ-ಪಕ್ಕದಲ್ಲೂ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಮುಂಜಾನೆಯಲ್ಲಿ ಸಮರ್ಪಕವಾಗಿ ಕಸ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಗಳ ಪಕ್ಕದಲ್ಲಿ ಖಾಲಿ ನಿವೇಶನ ಇದ್ದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ ಎಂದರು.
ಈ ಸಂಬಂಧ ಬಿಬಿಎಂಪಿ ಜತೆ ಒಡಂಬಡಿಕೆ ಮಾಡಿಕೊಳ್ಳಲು ಚರ್ಚೆ ನಡೆಸಲಾಗಿದೆ. ಸರ್ಕಾರಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಸಲಹೆಗಳು ಕೇಳಿ ಬಂದಿವೆ. ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಿಯಮ ಜಾರಿಗೊಳಿಸಲಿದ್ದೆವೆ ಎಂದು ಮಾಹಿತಿ ನೀಡಿದರು.
ಕೆಲವು ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಬೇಕೆಂಬ ಚಿಂತನೆ ಇದೆ. ಬೆಳಗ್ಗೆ ಬಂದು ವಾಹನ ನಿಲ್ಲಿಸಿದರೆ ಸಂಜೆಯಾದರೂ ವಾಹನವನ್ನು ತೆಗೆಯುವುದಿಲ್ಲ. ಇನ್ನು ಕೆಲವರು ತಿಂಗಳುಗಟ್ಟಲೆಯಾದರೂ ವಾಹನವನ್ನು ಅದೇ ಸ್ಥಳದಲ್ಲಿ ಬಿಟ್ಟಿರುತ್ತಾರೆ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ.
ಎಲ್ಲೆಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಇಂತಹ ಸಮಸ್ಯೆ ಇರುತ್ತದೆಯೋ ಅಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗುವುದು ಎಂದು ಹೇಳಿದರು. ಕೆಲವು ಪ್ರದೇಶಗಳಲ್ಲಿ ಮಾತ್ರ ಪಾರ್ಕಿಂಗ್ ಶುಲ್ಕ ವ್ಯವಸ್ಥೆ ಜಾರಿಯಲ್ಲಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಮಾತ್ರ ಜಾರಿ ಮಾಡುತ್ತೇವೆ.