ಕಾಶ್ಮೀರ ಕುರಿತು ಟ್ರಂಪ್ ಹೇಳಿಕೆಗೆ ಸಂಸತ್‍ನಲ್ಲಿ ಗದ್ದಲ, ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.23- ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದ ಇತ್ಯರ್ಥಗೊಳಿಸಲು ತಾವು ಮಧ್ಯಸ್ಥಿಕೆಗೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೋರಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಇಂದು ಸಂಸತ್‍ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಭಾರೀ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು.

ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರೆ ರಾಜ್ಯಸಭೆಯಲ್ಲಿ ಗದ್ದಲದಿಂದಾಗಿ ಕಲಾಪವನ್ನು 2 ಬಾರಿ ಮುಂದೂಡಲಾಯಿತು.  ಪ್ರಧಾನಿ ಮೋದಿ ಅವರು ಈ ರೀತಿ ಯಾವುದೇ ಹೇಳಿಕೆ ನೀಡಿಲ್ಲ.

ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತಕ್ಕೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಅಗತ್ಯವೂ ಇಲ್ಲ.ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರತಿಭಟನೆ:
ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಟ್ರಂಪ್ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಿ ಈ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜಾಯಿಷಿ ನೀಡಬೇಕೆಂದು ಆಗ್ರಹಿಸಿದರು.

ಸಭಾಧ್ಯಕ್ಷ ಓಂ ಬಿರ್ಲಾ ಇದು ಮಹತ್ವದ ವಿಷಯ. ದೇಶದ ಹಿತರಕ್ಷಣೆಯನ್ನು ಬಲಿ ಕೊಡಲು ನಾವು ಯಾರೂ ಸಿದ್ದರಿಲ್ಲ. ಈ ಬಗ್ಗೆ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪಷ್ಟಪಡಿಸಿದರು.  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಪ್ರಧಾನಿಯವರು ಈ ರೀತಿ ಹೇಳಿಕೆ ನೀಡಿಲ್ಲ.

ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಯಾಗಿದೆ ಎಂದರು. ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಓಂ ಬಿರ್ಲಾ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆನಿರತ ಕಾಂಗ್ರೆಸ್ ಸದಸ್ಯರು ತಮ್ಮ ತಮ್ಮ ಆಸನಗಳತ್ತ ಹಿಂದಿರುಗಿದರು.

# ರಾಜ್ಯಸಭೆ ಮುಂದೂಡಿಕೆ:
ಇದೇ ವಿಷಯ ರಾಜ್ಯಸಭೆಯಲ್ಲಿ ಮಾರ್ಧನಿಸಿತು. ಕಾಂಗ್ರೆಸ್ ಸದಸ್ಯರು ಪ್ರಧಾನಿ ಮೋದಿ ನೀಡಿದ್ದಾರೆನ್ನಲಾದ ಹೇಳಿಕೆಯನ್ನು ಪ್ರಸ್ತಾಪಿಸಿ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಬಯಸಿದರು.  ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮಾತನಾಡಿ, ಪ್ರಧಾನಿ ಮೋದಿ ಈ ರೀತಿ ಹೇಳಿಕೆ ನೀಡಿಲ್ಲ. ಆಕಾಶ್ಮೀರ ವಿಷಯದಲ್ಲಿ ನಮಗೆ ಯಾವುದೇ ತೃತೀಯ ವ್ಯಕ್ತಿಯ ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪದ ಅಗತ್ಯವಿಲ್ಲ. ಈ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಕಾಶ್ಮೀರ ಎಂದೆಂದಿಗೂ ಭಾರತ ಅವಿಭಾಜ್ಯ ಅಂಗ. ಪಾಕಿಸ್ತಾನವು ಗಡಿಯಾಚನೆಯ ಭಯೋತ್ಪಾದನೆ ಕುಮ್ಮಕು ನೀಡುವುದುನ್ನು ನಿಲ್ಲಿಸದ ಹೊರತು ಆ ದೇಶದೊಂದಿಗೆ ಮಾತುಕತೆ ಮುಂದುವರೆಸುವ ಪ್ರಶ್ನೆಯೇ ಇಲ್ಲ ಎಂದರು. ಶಿಮ್ಲಾ ಮತ್ತು ಲಾಹೋರ್ ಒಪ್ಪಂದದ ಆಧಾರದ ಮೇಲೆ ಭಾರತ ಮತ್ತು ಆಕಿಸ್ತಾನ ಮಾತುಕತೆ ದ್ವಿಪಕ್ಷತೀಯ ರೀತಿಯಲ್ಲಿ ನಡೆಯಬೇಕಿದೆ. ಇದಕ್ಕೆ ಮೂರನೇ ವ್ಯಕ್ತಿಯ ಪ್ರವೇಶದ ಅಗತ್ಯವಿಲ್ಲ ಎಂದರು.

ಜೈಶಂಕರ್ ಸ್ಪಷ್ಟೀಕರಣದಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಈ ಬಗ್ಗೆ ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಧರಣಿನಿರತ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿ ವಿಫಲರಾದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.ಮತ್ತೆ ಕಲಾಪ ಸಮಾವೇಶಗೊಂಡಾಗ ಇದೇ ಗದ್ದಲ-ಕೋಲಾಹಲ ಮುಂದುವರೆದ ಕಾರಣ ಸಭಾಪತಿ ಮಧ್ಯಾಹ್ನ 2 ಗಂಟೆಗೆ ಸದನವನ್ನು ಮುಂದೂಡಿದರು.

# ಮಧ್ಯಸ್ಥಿಕೆ ಕೋರಿಲ್ಲ:
ಕಾಶ್ಮೀರ ವಿವಾದ ಕುರಿತು ಭಾರತ ಮತ್ತು ಪಾಕಿಸ್ತಾನ ಕೋರಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದು, ಪ್ರಧಾನಿ ಮೋದಿ ಈ ಸಂಬಂಧ ಯಾವ ಮನವಿಯನ್ನೂ ಮಾಡಿಲ್ಲ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಭಾರತದ ನಾಯಕರು ಮಧ್ಯಸ್ಥಿಕೆ ವಹಿಸುವಂತೆ ಸಲಹೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ನೀಡಿರುವ ಹೇಳಿಕೆಗೆ ನರೇಂದ್ರ ಮೋದಿಯವರು ಯಾಕೆ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ್ ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವೀಶ್, ಅಮೆರಿಕದ ಪತ್ರಿಕೆಗಳು ಭಾರತ-ಪಾಕಿಸ್ತಾನ ಒಪ್ಪಿದರೆ ತಾವು ಕಾಶ್ಮೀರದ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಡೋನಾಲ್ಟ್ ಟ್ರಂಪ್ ಹೇಳಿದ್ದಾರೆಂದು ಬರೆದುಕೊಂಡಿರುವುದುನ್ನು ನಾನು ಗಮನಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಮಾಡಿದ್ದು, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ವಿವಾದಿತ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್ ಹೇಳಿದ್ದು, ಆದರೆ ಭಾರತ ಇದನ್ನು ತಳ್ಳಿ ಹಾಕಿದೆ. ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವ ವಿಷಯದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಸುರ್ಜೆವಾಲ, ಕಾಶ್ಮೀರ ವಿವಾದಲ್ಲಿ ಮೂರನೇಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂಬ ವಿಷಯವನ್ನು ಮತ್ತೆ ಪುನರುಚ್ಚಿಸಿರುವುದಕ್ಕೆ ಸ್ವಾಗತಾರ್ಹ ಎಂದು ಸುರ್ಜೆವಾಲ ಮರು ಟ್ವೀಟ್ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಮತ್ತು ಅವರ ನಡುವಿನ ಸಭೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ್ದು, ನಮ್ಮ ಪ್ರಧಾನಿ ಟ್ರಂಪ್ ಅವರ ಮಧ್ಯಸ್ಥಿಕೆಯನ್ನು ಕೇಳಿಕೊಂಡಿದ್ದಾರೆ ಎಂದು ಸುರ್ಜೆವಾಲ ಮರುಪ್ರಶ್ನೆ ಮಾಡಿದ್ದಾರೆ.

# ಅಮೆರಿಕ ರಾಜತಾಂತ್ರಿಕರ ಆತಂಕ:
ಟ್ರಂಪ್ ಹೇಳಿಕೆ ಬಗ್ಗೆ ಅಮೆರಿಕದಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ರಾಜತಾಂತ್ರಿಕರು ಇದನ್ನು ಸ್ವಾಗತಿಸಿದ್ದರೆ, ರಾಜಕೀಯ ವಿಷಯಗಳ ಪರಿಣಿತರು ರಾಷ್ಟ್ರಾಧ್ಯಕ್ಷರ ಹೇಳಿಕೆಯಿಂದ ಭಾರತ-ಪಾಕಿಸ್ತಾನದ ಸಂಬಂಧ ಮತ್ತಷ್ಟು ಅಳಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Facebook Comments