ಸಂಸತ್‍ನಲ್ಲಿ ಪ್ರತಿಧ್ವನಿಸಿದ ಪ್ರಿಯಾಂಕರೆಡ್ಡಿ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.2- ಹೈದರಾಬಾದ್‍ನಲ್ಲಿ ಕಳೆದ ವಾರ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಕೊಲೆಗೀಡಾದ ಪಶುವೈದ್ಯೆ ಪ್ರಿಯಾಂಕರೆಡ್ಡಿ ಪ್ರಕರಣ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ , ಡಿಎಂಕೆ, ಬಿಎಸ್‍ಪಿ ಸೇರಿದಂತೆ ಕೆಲವು ಪಕ್ಷಗಳು ಘೋಷಣಾ ಪತ್ರಗಳನ್ನು ಪ್ರದರ್ಶಿಸಿ ಈ ವಿಷಯ ಕುರಿತು ತಕ್ಷಣಾ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದವು.

ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಶೂನ್ಯ ವೇಳೆಯಲ್ಲಿ ಈ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಪ್ರಶ್ನೋತ್ತರ ಕಲಾಪ ನಡೆಯಲು ಅವಕಾಶ ನೀಡಬೇಕೆಂದು ಸದಸ್ಯರಿಗೆ ಸೂಚಿಸಿದರು.

ನಂತರ ಶೂನ್ಯ ವೇಳೆಯಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಇದು ಅತ್ಯಂತ ನೀಚ ಹಾಗೂ ಬರ್ಬರ ಕೃತ್ಯ. ಮಹಿಳೆಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರ ಭದ್ರತೆಗಾಗಿ ಇನ್ನೂ ಕಠಿಣ ಕಾನೂನು ಕ್ರಮಗಳನ್ನು ರೂಪಿಸುವುದಾಗಿ ಸದನಕ್ಕೆ ಭರವಸೆ ನೀಡಿದರು.

ಜಂತರ್‍ಮಂತರ್‍ನಲ್ಲಿ ಪ್ರತಿಭಟನೆ: ಈ ನಡುವೆ ಪ್ರಿಯಾಂಕರೆಡ್ಡಿ ಅತ್ಯಾಚಾರಿಗಳು ಮತ್ತು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಅನೇಕ ಮಂದಿ ದೆಹಲಿಯ ಜಂತರ್‍ಮಂತರ್‍ನಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ಜಂತರ್‍ಮಂತರ್‍ನಲ್ಲಿ ಸಮಾವೇಶಗೊಂಡು ಧರಣಿ ಮಾಡಿದರು.

Facebook Comments