ನೂತನ ಸಂಸತ್ ಭವನದಲ್ಲಿ 1,350 ಸಂಸದರಿಗೆ ಆಸನ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.19-ರಾಜಧಾನಿ ದೆಹಲಿಯ ಶಕ್ತಿ ಕೇಂದ್ರ ಸಂಸತ್ ಭವನವನ್ನು ಅತ್ಯಾಧುನಿಕ ತ್ರಿಕೋನಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಹತ್ತು-ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪಾರ್ಲಿಮೆಂಟ್‍ನ ಜಂಟಿ ಅಧಿವೇಶನದ ಪ್ರಮುಖ ಕೇಂದ್ರವಾಗಲಿರುವ ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ 1350 ಸದಸ್ಯರಿಗೆ ಆಸನದ ವ್ಯವಸ್ಥೆ ಹೊಂದುವಂತೆ ಪುನರ್ ನವೀಕರಣ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆ 2024ರೊಳಗೆ ಮುಕ್ತಾಯಗೊಳ್ಳಲಿದೆ.

ನೂತನ ಸಂಸತ್ ಸಂಕೀರ್ಣ ನಿರ್ಮಾಣದ ಯೋಜನೆಯನ್ನು 2022ರೊಳಗೆ ಮುಕ್ತಾಯಗೊಳಿಸಲು ಈ ಹಿಂದೆ ಯೋಜನೆ ಹಾಕಿಕೊಳ್ಳಲಾಗಿತ್ತು. ಮೊದಲ ಹಂತದ ಯೋಜನೆ ಆಂತಿಮಗೊಂಡಿದ್ದು, ಟೆಂಡರ್ ಕರೆಯಲಾಗಿದೆ. ಪ್ರಸ್ತುತದಲ್ಲಿನ ವಿನ್ಯಾಸದಂತೆ ವಿದ್ಯುತ್ ದೀಪಾಲಂಕೃತ ಭವ್ಯ ಕಟ್ಟಡಗಳನ್ನು ಹೊಂದಿರುವ ತ್ರಿಕೋನ ರೀತಿಯ ಹೊಸ ಸಂಸತ್ ಸಂಕೀರ್ಣ ನಿರ್ಮಿಸಲಾಗುತ್ತಿದೆ.

ಸಂಸದರು ಆರಾಮವಾಗಿ ಕುಳಿತುಕೊಳ್ಳಲು ಅವಕಾಶವಾಗುವಂತೆ ಎರಡು ಆಸನದ ಬೆಂಚುಗಳನ್ನು ಒದಗಿಸಲಾಗುವುದು, ಪುನರ್ ನವೀಕರಣ ಯೋಜನೆಯಂತೆ ರಾಜಪಥವನ್ನು ಮರು ವಿನ್ಯಾಸಗೊಳಿಸಲಾಗುವುದು, ಸೆಂಟ್ರಲ್ ಸೆಕ್ರೆಟರಿಯೇಟ್ ರೂಪಿಸಲಾಗುತ್ತಿದೆ. ನಾರ್ತ್ ಬ್ಲಾಕ್ , ಸೌತ್ ಬ್ಲಾಕ್ ಮ್ಯೂಸಿಯಂ ಇರಲಿವೆ. ಅಹಮದಾಬಾದ್ ಮೂಲದ ಎಚ್ಸಿಪಿ ವಿನ್ಯಾಸದಂತೆ ಹೊಸ ತ್ರಿಕೋನ ಸಂಸತ್ತು ಕಟ್ಟಡವು ಅಸ್ತಿತ್ವದಲ್ಲಿರುವ ಸಂಕೀರ್ಣದ ಪಕ್ಕದಲ್ಲಿ ಬರಲಿದೆ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವನ್ನು ಕೆಲವು ಹೊಸ ಸರ್ಕಾರಿ ಕಟ್ಟಡಗಳನ್ನು ಹೊಂದಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಪ್ರಧಾನ ಮಂತ್ರಿಗಳ ನಿವಾಸವನ್ನು ಈಗಿರುವ ಸೌತ್ ಬ್ಲಾಕ್ ಸಂಕೀರ್ಣದ ಹಿಂದೆ ಸ್ಥಳಾಂತರಿಸಲಾಗುವುದು ಮತ್ತು ಉಪ ರಾಷ್ಟ್ರಪತಿಗಳ ನಿವಾಸ ನಾರ್ತ್ ಬ್ಲಾಕ್ ಹಿಂದಕ್ಕೆ ಸ್ಥಳಾಂತರವಾಗಲಿದೆ. ಅತ್ಯಾಕರ್ಷಕ ವಾಸ್ತುಶಿಲ್ಪದೊಂದಿಗೆ ನಿರ್ಮಾಣವಾಗಲಿರುವ ತ್ರಿಕೋನಾಕಾರದ ಹೊಸ ಸಂಸತ್ ಭವನ ಭಾರತದ ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಲಿದೆ.

Facebook Comments