ಇಂದು ಕೂಡ ಸಂಸತ್‍ನ ಉಭಯ ಸದನಗಳ ಕಲಾಪ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30- ಹನ್ನೆರಡು ಮಂದಿ ರಾಜ್ಯಸಭಾ ಸದಸ್ಯರ ಅಮಾನತು ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದ್ದರಿಂದ ಸಂಸತ್‍ನ ಉಭಯ ಸದನಗಳ ಕಲಾಪ ಇಂದು ಅಸ್ತವ್ಯಸ್ತಗೊಂಡಿದೆ. ಲೋಕಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ಗದ್ದಲ ನಡೆದಿದ್ದರಿಂದ ಕಲಾಪ ಮುಂದೂಡಿಕೆಯಾಗಿದೆ. ಈ ನಡುವೆ ಕಾಂಗ್ರೆಸ್ ಒಂದು ದಿನದ ಮಟ್ಟಿಗೆ ಲೋಕಸಭೆಯ ಅಧಿವೇಶನವನ್ನು ಬಹಿಷ್ಕರಿಸಿದೆ.

ಚಳಿಗಾಲದ ಅಧಿವೇಶನವನ್ನು ಪೂರ್ತಿಯಾಗಿ ಬಹಿಷ್ಕರಿಸಬೇಕೆಂದು ಉಳಿದ ಪ್ರತಿಪಕ್ಷಗಳು ಒತ್ತಡ ಹೇರಿವೆ. ಆದರೆ ಕಾಂಗ್ರೆಸ್ ಒಂದು ದಿನದ ಅಧಿವೇಶನ ಬಹಿಷ್ಕಾರಕ್ಕೆ ಮಾತ್ರ ಸೀಮಿತಗೊಂಡಿದೆ. ಎನ್‍ಸಿಪಿ, ಡಿಎಂಕೆ, ಸಮಾಜವಾದಿ ಪಕ್ಷ, ಎಡಪಕ್ಷಗಳು, ಆರ್‍ಜೆಡಿ, ಎಎಪಿ, ಟಿಎಸ್‍ಆರ್, ವಿಸಿಕೆ ಸೇರಿದಂತೆ 16 ಪಕ್ಷಗಳು ಸಭೆ ಸೇರಿ ಚರ್ಚೆ ನಡೆಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಬಳಿಕ ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ಗದ್ದಲದ ನಡುವೆ ಉಭಯ ಸದನಗಳಲ್ಲೂ ಹಲವಾರು ಪ್ರಮುಖ ಮಸೂದೆಗಳು ಮಂಡನೆಯಾಗಿವೆ. 12 ಮಂದಿ ರಾಜ್ಯಸಭಾ ಸದಸ್ಯರ ಅಮಾನತು ಆದೇಶವನ್ನು ಆರ್‍ಜೆಡಿ ಮತ್ತು ಕಾಂಗ್ರೆಸ್ ಪಕ್ಷ ವಿಭಿನ್ನವಾಗಿ ಬಣ್ಣಿಸಿವೆ.

ಕಾಂಗ್ರೆಸ್‍ನ ಸದಸ್ಯ ಅಭಿಷೇಕ್ ಸಿಂಗ್ವಿ ಅವರು ಆಡಳಿತಾರೂಢ ಎನ್‍ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಹೀಗಾಗಿ ಕೆಲವು ಮಸೂದೆಗಳನ್ನು ಅಂಗೀಕರಿಸಿಕೊಳ್ಳಲು ಅವರಿಗೆ ಕಷ್ಟವಾಗಿದೆ. ಅದಕ್ಕಾಗಿ 12 ಮಂದಿ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ಇದು ಪ್ರಜಾಸತಾತ್ಮಕ ಸಂಸದೀಯ ನಡುವಳಿಕೆಯಲ್ಲಿ ನಿಯಮ ಬಾಹಿರ ಮತ್ತು ಅಸಂವಿಧಾನಿಕ ಎಂದು ಕಿಡಿಕಾರಿದ್ದಾರೆ.

ಆರ್‍ಜೆಡಿಯ ಸಂಸದ ಮನೋಜ್ ಝಾ ಅವರು, 12 ಮಂದಿ ಸದಸ್ಯರ ನಡವಳಿಕೆಯನ್ನು ಅಶಿಸ್ತು ಎಂದು ಬಿಂಬಿಸುತ್ತಿರುವುದು ದುರುದ್ದೇಶಪೂರ್ವಕವಾಗಿದೆ. ಸಂಸತ್‍ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಖಾಸಗೀಕರಣಕ್ಕೆ ಮಸೂದೆ ಮಂಡನೆಯಾಗುತ್ತದೆ. ಲೋಕಸಭೆಯಲ್ಲಿ ಅದನ್ನು ಸುಲಭವಾಗಿ ಅಂಗೀಕರಿಸಿಕೊಳ್ಳುವ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿದೆ.

ಇದಕ್ಕಾಗಿ ಕುಂಟು ನೆಪ ಹಿಡಿದು ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇಲ್ಲಿ ಸಂಖ್ಯೆಗಳ ಆಟ ನಡೆಯುತ್ತಿದೆ. ಅಶಿಸ್ತು ಎಂಬುದು ಉತ್ತಮ ಉದಾಹರಣೆ ಅಲ್ಲ. ಪ್ರಮುಖ ಮಸೂದೆಗಳನ್ನು ಅಂಗೀಕರಿಸಿಕೊಡಲು ಸರ್ಕಾರ ಆಡುತ್ತಿರುವ ನಾಟಕ ಎಂದು ಕಿಡಿಕಾರಿದ್ದಾರೆ.

ತೃಣಮೂಲ ಕಾಂಗ್ರೆಸ್‍ನ ಸದಸ್ಯ ಡೆರೆಕ್ ಓ ಬರೇನ್ ಅವರು, ಕೇವಲ 12 ಮಂದಿ ಅಷ್ಟೇ ಏಕೆ? ಮುಂದಿನ ಸಾಲಿನಲ್ಲಿರುವ 9 ಮಂದಿ ಸಂಸದರನ್ನೂ ಅಮಾನತುಗೊಳಿಸಿ ನಿಮಗೆ ಇಷ್ಟ ಬಂದಂತೆ ಅವೇಶನ ನಡೆಸಿಕೊಳ್ಳಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Facebook Comments