ಸಂಸತ್‍ನ ಉಭಯ ಸದನಗಳಲ್ಲೂ ಪ್ರತಿಪಕ್ಷಗಳ ಗದ್ದಲ : ಇಂದು ಕೂಡ ಕಲಾಪ ಅಸ್ತವ್ಯಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.2- ಸಂಸತ್‍ನ ಉಭಯ ಸದನಗಳಲ್ಲೂ ಪ್ರತಿಪಕ್ಷಗಳ ಗದ್ದಲ, ಗಲಾಟೆ, ಧರಣಿ, ಪ್ರತಿಭಟನೆಗಳು ಮುಂದುವರೆದಿದ್ದರಿಂದ ಹಲವಾರು ಬಾರಿ ಕಲಾಪವನ್ನು ಮುಂದೂಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭೆ ಬೆಳಗ್ಗೆ ಸಮಾವೇಶಗೊಂಡಾಗ ಸಭಾಧ್ಯಕ್ಷ ಓಂ ಬಿರ್ಲಾ ಅವರು ಪೀಠದಲ್ಲಿದ್ದರು. ಒಲಿಂಪಿಕ್‍ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು ಅವರನ್ನು ಸದನದ ಪರವಾಗಿ ಅಭಿನಂದಿಸಿದರು.

ಬ್ಯಾಡ್‍ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಒಲಿಂಪಿಕ್‍ನಲ್ಲಿ ಎರಡು ಬಾರಿ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದು, ದಾಖಲೆ ಬರೆದಿದ್ದಾರೆ. ಅವರು ಸಾಧನೆ ಯುವ ವರ್ಗಕ್ಕೆ ಸ್ಪೂರ್ತಿದಾಯಕ. ನಾವೇಲ್ಲಾ ಸಿಂಧು ಅವರನ್ನು ಅಭಿನಂದಿಸಬೇಕು ಎಂದು ಸಭಾಧ್ಯಕ್ಷರು ಹೇಳಿದರು. ನಂತರ ಪ್ರತಿಪಕ್ಷಗಳು ಪೆಗಾಸಸ್ ಬೇಹುಗಾರಿಕೆ ಹಗರಣವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಅರಂಭಿಸಿದ್ದವು. ಸಭಾಧ್ಯಕ್ಷರು ಪ್ರತಿಭಟನೆ ಕೈ ಬಿಟ್ಟು ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಘೋಷಣೆಗಳನ್ನು ಕೂಗದೆ ಜನಪರವಾದ ವಿಷಯಗಳನ್ನು ಪ್ರಸ್ತಾಪಿಸಿ ಎಂದು ಸೂಚಿಸಿದರು.

ನೀವೆಲ್ಲಾ ಗೌರವಯುತವಾದ ಜನಪ್ರತಿನಿಧಿಗಳು, ಲಕ್ಷಾಂತರ ಜನರನ್ನು ನೀವು ಪ್ರತಿನಿಧಿಸುತ್ತೀರಾ. ಈ ಮನೆಯಲ್ಲಿ ಜನರ ಸಮಸ್ಯೆ ಚರ್ಚೆಯಾಗಬೇಕು. ಚರ್ಚೆಗೆ ನಾನು ಸಮಯ ನೀಡುತ್ತೇನೆ ಎಂದರು. ಪ್ರತಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆಯೂ ಪ್ರಶ್ನೋತ್ತರವನ್ನು ಮುಂದುವರೆಸ ಲಾಯಿತು. ಕಲಾಪ ಅರ್ಧಗಂಟೆಯಲ್ಲಿ ಮುಗಿದಿದ್ದರಿಂದ ಇನ್ನೂ ಏಳು ಪ್ರಶ್ನೆಗಳು ಮತ್ತು ಅದರ ಉಪಪ್ರಶ್ನೆಗಳು ಬಾಕಿ ಇವೆ. ಸುಗಮ ಕಲಾಪಕ್ಕೆ ಸಹಕಾರ ನೀಡಿ ಎಂದು ಸಭಾಧ್ಯಕ್ಷರು ಮನವಿ ಮಾಡಿದರು.

ಆದರೂ ಪ್ರತಿಭಟನೆ ಮುಂದುವರೆದಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು 12 ಗಂಟೆಗಳವರೆಗೂ 25 ನಿಮಿಷಗಳ ಕಾಲ ಮುಂದೂಡಿದರು. ನಂತರ ಸಮಾವೇಶಗೊಂಡಾಗ ಕಿರಿತ್ ಪ್ರೆಮಜೀಬಾಯಿ ಸೊಲಂಕಿ ಪೀಠಾಸೀನರಾಗಿದ್ದರು. ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದವು. ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌದರಿ ಅವರು ಮಾತನಾಡಿ, ಸರ್ಕಾರ ಒಂದೊಂದೆ ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಿಕೊಳ್ಳುತ್ತಿದೆ. ನಾವು ಎಲ್ಲಾ ವಿಧೇಯಕಗಳ ಮೇಲೂ ಚರ್ಚೆ ಮಾಡಲು ಬಯಸುತ್ತೇವೆ. ಅದಕ್ಕೂ ಮೊದಲು ಪೆಗಾಸಸ್ ಬೇಹುಗಾರಿಕೆ ಹಗರಣದ ಕುರಿತು ಚರ್ಚೆಯಾಗಬೇಕು ಎಂದು ಹೇಳಿದರು.

ಈ ನಡುವೆ ಕೆಲವು ಮಸೂದೆಗಳನ್ನು ಮಂಡಿಸ ಲಾಯಿತು. ಗದ್ದಲ ಮುಂದುವರೆದಾಗ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇನ್ನು ರಾಜ್ಯ ಸಭೆಯಲ್ಲೂ ಗಲಾಟೆ ಗದ್ದಲಗಳಿಂದ ಕಲಾಪವನ್ನು ಮಧ್ಯಾಹ್ನ 12 ಮತ್ತು 2 ಗಂಟೆಗಳ ಸಮಯದಲ್ಲಿ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಉಪಸಭಾಧ್ಯಕ್ಷ ಹರಿವಂಶ ಅವರು ಪ್ರತಿಭಟನೆ ಕೈ ಬಿಟ್ಟು ಚರ್ಚೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರೂ, ಗದ್ದಲದ ನಡುವೆ ಸಾಧ್ಯವಾಗಲಿಲ್ಲ. 12 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.

ಬಳಿಕ ಸಮಾವೇಶಗೊಂಡಾಗ ಕೆಲ ಕಾಗದ ಪತ್ರಗಳ ಮಂಡನೆ ಮಾಡಲಾಯಿತು. ಎಂದಿನಂತೆ ಪ್ರತಿಪಕ್ಷಗಳು ಗಲಾಟೆ ಮಾಡಿದಾಗ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಯಿತು.

Facebook Comments