ನಾಳೆಯಿಂದ ಸಂಸತ್ ಅಧಿವೇಶನ, ಸರ್ಕಾರದ ವಿರುದ್ಧ ದಾಳಿಗೆ ವಿಪಕ್ಷ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.17- ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಆರ್ಥಿಕ ಕುಸಿತ, ನಿರುದ್ಯೋಗ ಹೆಚ್ಚಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರಗತಿ ಕುಂಠಿತ ಸೇರಿದಂತೆ ವಿವಿಧ ಪ್ರಮುಖ ವಿಷಯಗಳನ್ನು ಮುಂದಿಟ್ಟು ಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.

ಈ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾದ-ವಾಗ್ವಾದ ಮತ್ತು ಕೋಲಾಹಲದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ.

ಡಿ.13ರವರೆಗೆ ನಡೆಯುವ ಸಂಸತ್ ಅಧಿವೇಶನ ದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ , ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ, ವೈದ್ಯರ ಮೇಲೆ ಹಲ್ಲೆ ನಡೆಸು ವವರ ವಿರುದ್ಧ ಕಠಿಣ ಕ್ರಮ ಸೇರಿದಂತೆ ಸುಮಾರು 35 ಮಸೂದೆಗಳಿಗೆ ಅಂಗೀಕಾರ ಲಭಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರ್ಥಿಕ ಹಿಂಜರಿತ , ಜಿಡಿಪಿ ಕುಸಿತ, ನಿರುದ್ಯೋಗ ಸಮಸ್ಯೆ ಹೆಚ್ಚಳ, ಕೈಗಾರಿಕಾ ವಲಯದ ಅವಸಾನ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿವೆ.

ನಿನ್ನೆ ಸಂಜೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸರ್ವ ಪಕ್ಷಗಳ ಸಭೆ ಕರೆದು ಸುಗಮ ಕಲಾಪ ಅವಕಾಶ ನೀಡುವಂತೆ ಮತ್ತು ದೇಶದ ಹಾಗೂ ಸಾರ್ವಜನಿಕರ ವಿಷಯಗಳಿಗೆ ಪೂರಕವಾದ ಚರ್ಚೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದರು.

Facebook Comments

Sri Raghav

Admin