ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.8- ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಜಾರಿಗೆ ತರಲಾಗಿತ್ತು. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು ರಾಜ್ಯಾದ್ಯಂತ ವಿಸ್ತರಿಸಲು ಪಶುಸಂಗೋಪನಾ ಇಲಾಖೆ ಮುಂದಾಗಿದೆ. ಜಾನುವಾರುಗಳ ಚಿಕಿತ್ಸೆಗಾಗಿ ವಿಶೇಷ ಆಂಬುಲೆನ್ಸ್ ಸೇವೆಯನ್ನು ಸರ್ಕಾರ ಕಳೆದ ವರ್ಷ ಆಗಸ್ಟ್‍ನಲ್ಲಿ ಜಾರಿಗೆ ತಂದಿತ್ತು.

ಇಲ್ಲಿಯವರೆಗೆ 15 ಜಿಲ್ಲೆಗಳಲ್ಲಿ ಈ ಸೇವೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಒಟ್ಟು 25 ಆಂಬುಲೆನ್ಸ್‍ಗಳನ್ನು ಕಾರ್ಯನಿರ್ವಹಿಸುತ್ತಿವೆ. ಈ ಆ್ಯಂಬುಲೆನ್ಸ್‍ಗಳು ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನವಾಗಿದೆ. ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸುವ ಈ ಸೇವೆಗಳನ್ನು ಇಲಾಖೆಯ ಸಹಾಯವಾಣಿ ಸೇವೆಗೆ ಲಿಂಕ್ ಮಾಡಲಾಗಿದೆ.

ಸುಸಜ್ಜಿತ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಿವೆ. ಶಸ್ತ್ರ ಚಿಕಿತ್ಸಾ ಘಟಕವಿದೆ. ವಾಹನದಲ್ಲಿ ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ ಮಾಡಲಾಗಿದೆ. 250 ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ಹೊಂದಿದ್ದು, 200 ಕೆ.ಜಿ ತೂಕ ಸಾಮಥ್ರ್ಯದ ಶಸ್ತ್ರಚಿಕಿತ್ಸಾ ಟೇಬಲ್, ಎ/ಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಾಶ್ ಬೇಸಿನ್, 100 ವೋಲ್ಟ್ ಎಲ್‍ಇಡಿ ಲೈಟ್, ಆಮ್ಲಜನಕ ಸಪೋರ್ಟ್ ಸಿಸ್ಟಮ್, ಆಕಸ್ಮಿಕ ಬೆಂಕಿ ಅನಾಹುತ ತಡೆಗೆ ವ್ಯವಸ್ಥೆ, ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್, ಪ್ರಸೂತಿ ಕಿಟ್‍ಗಳ ಪೆಟ್ಟಿಗೆಗಳು ಮತ್ತು ಇತರೆ ಉಪಕರಣಗಳನ್ನು ಇಡಲು ಕಪಾಟುಗಳ ವ್ಯವಸ್ಥೆ ಹೊಂದಿದೆ. ವಿಷಪ್ರಾಸನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆ ಉಬ್ಬರ, ಉಸಿರುಗಟ್ಟುವಿಕೆ, ಅಪಘಾತ, ಮೂಳೆಮುರಿತ, ಬೆಬೇಸಿಯೋಸಿನ್, ಆಂಥ್ರಾಕ್ಸ್, ಚಪ್ಪೆರೋಗ, ಗಳಲೇ ರೋಗ, ಹಾಲುಜ್ವರ, ಕೆಚ್ಚಲು ಬಾವಿಗೆ ಚಿಕಿತ್ಸೆ ನೀಡಲಾಗುತ್ತದೆ.

ವಿವಿಧ ರೋಗೊದ್ರೇಕಗಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಜಾನುವರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ರೈತರ ಮನೆ ಬಾಗಿಲಿಗೆ ತೆರಳಿ ತಜ್ಞ ಪಶುವೈದ್ಯರು ಹಾಗೂ ಸುಸಜ್ಜಿತ ಪಶು ಚಿಕಿತ್ಸಾ ವಾಹನ ದನ, ಎಮ್ಮೆ, ಕುರಿ, ಮೇಕೆ, ಹಾಗೂ ಇನ್ನಿತರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸುವ ಗುರಿ ಹೊಂದಿದೆ.

ಸದ್ಯ ರಾಯಚೂರು, ಕಲಬುರಗಿ, ಧಾರವಾಡ, ಬಿಜಾಪುರ, ಬೆಳಗಾವಿ, ಮಂಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಬೀದರ್, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ 15 ಜಿಲ್ಲೆಗಳ ಪಶುವೈದ್ಯಕೀಯ ಆಂಬುಲೆನ್ಸ್ ನೀಡಲಾಗುತ್ತಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ.

ಒಟ್ಟು 41 ಪಶು ಸಂಜೀವಿನಿ ಆಂಬುಲೆನ್ಸ್ ನೀಡಲು ನಿರ್ಧರಿಸಲಾಗಿದೆ. ಇನ್ನೂ 25 ಪಶುಸಂಜೀವಿನಿ ಆಂಬುಲೆನ್ಸ್ ರಸ್ತೆಗಿಳಿಯಲಿದ್ದು, ಈ ಪೈಕಿ 10 ಆಂಬುಲೆನ್ಸ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದೆ.ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಾರಿಯಾದ ಈ ಸೇವೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಈ ಸುಸಜ್ಜಿತ ಆಂಬುಲೆನ್ಸ್ ರೈತರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ, ಮಾರ್ಚ್ ಅಂತ್ಯದವರೆಗೆ ಪಶುಸಂಜೀವಿನಿ ಆಂಬುಲೆನ್ಸ್ ಮೂಲಕ 1006 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ದ.ಕನ್ನಡ ಜಿಲ್ಲೆಯಲ್ಲಿ 326 ಜಾನುವಾರು, ಹಾಸನ 180, ತುಮಕೂರು 68, ಶಿವಮೊಗ್ಗ 58, ಧಾರವಾಡ, ಚಿತ್ರದುರ್ಗ, ವಿಜಯಪುರದಲ್ಲಿ ತಲಾ 56 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಒಟ್ಟು 457 ಗ್ರಾಮಗಳಿಗೆ ತೆರಳಿ ಪಶು ಆಂಬುಲೆನ್ಸ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಆಂಬುಲೆನ್ಸ್ ಗಳು ಒಟ್ಟು 30,255 ಕಿ.ಮೀ ಕ್ರಮಿಸಿದೆ.
ಮೇ ತಿಂಗಳಲ್ಲಿ 42 ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. 75 ಗ್ರಾಮಗಳಿಗೆ ತೆರಳಿ ಶಸ್ತ್ರಚಿಕಿತ್ಸೆ ನೀಡಲಾಗಿದೆ.

Facebook Comments