ಪ್ಯಾಸೆಂಜರ್ ರೈಲು ಸಂಚಾರಕ್ಕೆ ಒತ್ತಾಯಿಸಿ ಪ್ರಯಾಣಿಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು,ಅ.26- ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲುಗಾಡಿಯ ಸಂಚಾರವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ರೈಲ್ವೆ ಪ್ರಯಾಣಿಕರು ಬೆಳ್ಳಂಬೆಳಿಗ್ಗೆ ಬಸವ ಎಕ್ಸ್‍ಪ್ರಸ್ ರೈಲುಗಾಡಿಯನ್ನು ತಡೆದು ಪ್ರತಿಭಟಿಸಿದರು.

ಕಳೆದೊಂದು ತಿಂಗಳಿನಿಂದ ಹಿಂದೂಪುರದ ನಿಲ್ದಾಣದಲ್ಲಿ ಲೈನ್ ಕಾಮಗಾರಿ ನೆಪವನ್ನೊಡ್ಡಿ ಇಲಾಖೆಯವರು ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಳಿಸಿದ್ದು, ಪ್ರತಿನಿತ್ಯ ದೊಡ್ಡಬಳ್ಳಾಪುರ, ಯಲಹಂಕ , ಯಶವಂತಪುರ, ಬೆಂಗಳೂರು ಮೆಜೆಸ್ಟಿಕ್ ಕಡೆಗಳಿಗೆ ಕಾರ್ಖಾನೆ , ಕಚೇರಿ, ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಹೋಗುವ ನೌಕರರು ಹಾಗೂ ಕಚೇರಿ ಸಿಬ್ಬಂದ್ದಿಗಳು ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಪರ್ಯಾಯ ವ್ಯವಸ್ಥೆ ಮಾಡಿ: ಪ್ರತಿನಿತ್ಯ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರು ಪಾಸ್ (ಸೀಸನ್ ಪಾಸ್) ಮಾಡಿಸಿಕೊಂಡು ಓಡಾಡುತ್ತಿರುವವರಿಗೆ ಎಕ್ಸ್‍ಪ್ರಸ್ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಪ್ಯಾಸೆಂಜರ್ ರೈಲು ಸಂಚಾರ ಮಾಡಿ ಇಲ್ಲವೇ ಪಾಸ್ ಪ್ರಯಾಣಿಕರುಗಳಿಗೆ ಎಲ್ಲಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಅವಕಾಶವನ್ನು ಮಾಡಿಕೊಡುವಂತೆ ಒತ್ತಾಯಿಸಿ ಅರ್ಧಗಂಟೆ ಕಾಲ ಬಸವ ರೈಲನ್ನು ( ಬಾಗಲಕೋಟೆ-ಮೈಸೂರು ರೈಲು) ತಡೆದರು. ಹಿಂದೂಪುರ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ಯಾಸೆಂಜರ್ ರೈಲನ್ನು ಗೌರಿಬಿದನೂರು-ಬೆಂಗಳೂರು ಮಾತ್ರ ಸಂಚಾರ ಮಾಡುವಂತೆ ಪ್ರಯಾಣಿಕರು ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿ ವೃತ್ತನಿರೀಕ್ಷಕ ಶಶಿಧರ್ , ಎಸ್ಸೈಗಳಾದ ವಿಜಯ್ ಕುಮಾರ್, ಚಂದ್ರಕಲಾ ಮತ್ತು ಸಿಬ್ಬಂದ್ದಿಗಳು ರೈಲು ತಡೆಯನ್ನು ಕೈಬಿಡುವಂತೆ ಮನವಿ ಮಾಡಿದರು, ನಂತರ ಸಿಪಿಐ ಶಶಿಧರ್ ರೈಲ್ವೆ ಇಲಾಖೆಯ ಡಿಜಿಎಂ. ಬಳಿ ಚರ್ಚಿಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆಯನ್ನು ಪ್ರಯಾಣಿಕರು ಕೈ ಬಿಟ್ಟರು.

Facebook Comments