ದುಷ್ಟರಿಂದ ಕತ್ತರಿಸಲ್ಪಟ್ಟ ಎಎಸ್‍ಐ ಕೈ ಮರುಜೋಡಣೆ ಯಶಸ್ವಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ ಏ.13- ಲಾಕ್‍ಡೌನ್ ವೇಳೆ ದುಷ್ಕರ್ಮಿಗಳ ದಾಳಿಯಿಂದ ಕತ್ತರಿಸಲ್ಪಟ್ಟಿದ್ದ ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ (ಎಎಸ್‍ಐ) ಕೈಯನ್ನು ಸತತ ಏಳೂವರೆ ತಾಸುಗಳ ಶಸ್ತ್ರಚಿಕಿತ್ಸೆ ನಂತರ ಮರು ಜೋಡಣೆ ಮಾಡುವಲ್ಲಿ ಪಂಜಾಬ್ ವೈದ್ಯರು ಯಶಸ್ವಿಯಾಗಿದ್ದಾರೆ.

ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ಎಎಸ್‍ಐ ಎಡಗೈ ಕತ್ತರಿಸಿ, ಇಬ್ಬರು ಪೊಲೀಸರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ನಡೆದಿತ್ತು. ನಿಹಾಂಗ್ಸ್ (ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಮತ್ತು ಸಡಿಲ ನೀಲಿ ಮೇಲಂಗಿ ಧರಿಸಿದ ಸಿಖ್ಖರು) ಗುಂಪಿನ ಐವರು ಈ ಕೃತ್ಯ ಎಸಗಿದ್ದರು.

ನಿನ್ನೆ ಬೆಳಗ್ಗೆ 6.15ರಲ್ಲಿ ನಿಹಾಂಗ್ಸ್‍ನ ಗುಂಪೊಂದು ವಾಹನದಲ್ಲಿ ಚಲಿಸುತ್ತಿದ್ದರು. ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ತರಕಾರಿ ಮಾರುಕಟ್ಟೆ ಬಳಿ ಮಂಡಿ ಮಂಡಳಿಯ ಅಧಿಕಾರಿಗಳು ಅವರನ್ನು ತಡೆದರು. ಆದರೆ, ಇದನ್ನು ಲೆಕ್ಕಿಸದೆ ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿದ ಶಸ್ತ್ರಸಜ್ಜಿತರು ಪೊಲೀಸರು ಮೇಲೂ ದಾಳಿ ನಡೆಸಿದರು.

ಹರ್‍ಜೀತ್ ಸಿಂಗ್ ಎಂಬ ಎಎಸ್‍ಐ ಎಡಗೈ ಕತ್ತರಿಸಿದ ದುಷ್ಕರ್ಮಿಗಳು ಇನ್ನಿಬ್ಬರ ಸಿಬ್ಬಂದಿ ಮೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಎಡಗೈ ಕತ್ತರಿಸಲ್ಪಟ್ಟ ಎಎಸ್‍ಐ ಹರ್‍ಜೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತು.

ವೈದ್ಯಕೀಯ ತಂಡವೊಂದು ಪ್ಲಾಸ್ಟಿಕ್ ಸರ್ಜನ್ ನೇತೃತ್ವದಲ್ಲಿ ಸಿಂಗ್ ಅವರ ಕೈಗೆ ಹೊಲಿಗೆ ಹಾಕಿ ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುದೀರ್ಘ ಶಸ್ತ್ರಚಿಕಿತ್ಸೆಗೆ ಏಳೂವರೆ ತಾಸು ಬೇಕಾಯಿತು. ದಕ್ಷ ಮತ್ತು ಸಮರ್ಥ ಎಎಸ್‍ಐ ಹರ್‍ಜಿತ್ ಸಿಂಗ್ ಅವರ ಕೈ ಮರುಜೋಡಣೆಯಾಗಿದೆ.

ಅವರು ಚೇತರಿಸಿಕೊಂಡು ಗುಣಮುಖರಾಗುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ದಿನಕರ್ ಗುಪ್ತ ಸಂತಸದಿಂದ ಟ್ವೀಟ್ ಮಾಡಿದ್ದಾರೆ. ಲಾಕ್‍ಡೌನ್ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರ ಮೇಲೆ ದೇಶದ ವಿವಿಧೆಡೆ ಹಲ್ಲೆ ಪ್ರಕರಣಗಳು ಮುಂದುವರಿದಿರುವಾಗಲೇ ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿದೆ.

Facebook Comments

Sri Raghav

Admin