ಯಥಾಸ್ಥಿತಿಯಲ್ಲೇ ಮುಂದುವರಿದ ನಾಡೋಜ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮಾ.15- ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ, ನಾಡೋಜ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರಿದಿದ್ದು, ಆಸ್ಪತ್ರೆಗೆ ಇಂದು ಹಲವು ಮಠಾಧೀಶರು, ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರನ್ನು ಇಂದು ಭೇಟಿ ಮಾಡಿದ ಇಳಕಲ್ಲು ಗುರು ಮಹಾಂತ ಶ್ರೀಗಳು, ಶ್ರೀ ಬಸವಲಿಂಗ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಶ್ರೀಗಳು, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಮುಂತಾದವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಪಾಪು ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿದ್ದು, ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ವೈದ್ಯರು ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದರು. ಆ ವ್ಯವಸ್ಥೆ ಮುಂದುವರಿದಿದ್ದು, ಸ್ವಲ್ಪ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಮಾತನಾಡಿ, ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ನಾಡಿನ ಸಾಕ್ಷಿಪ್ರಜ್ಞೆ ಆಗಿದ್ದಾರೆ.

ಪತ್ರಕರ್ತರಾಗಿ, ಸಾಹಿತಿಗಳಾಗಿ, ಕನ್ನಡ ನಾಡು-ನುಡಿ-ಜಲಕ್ಕಾಗಿ ನಿರಂತರ ಹೋರಾಟ ಮಾಡಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಸಂತಸದ ಸಂಗತಿ. ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.

ಇಳಕಲ್‍ನ ಗುರು ಮಹಾಂತ ಶ್ರೀಗಳು ಮಾತನಾಡಿ, ಕನ್ನಡ ನಾಡು-ನುಡಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪಾಪು ಅವರ ಆರೋಗ್ಯ ಹದಗೆಟ್ಟ ಸುದ್ದಿ ಕೇಳಿ ಬೇಸರವಾಗಿತ್ತು. ಈಗ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದು ಹೇಳಿರುವುದು ಸಂತಸ ತಂದಿದೆ ಎಂದರು. ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ್ ಪಾಟೀಲ್, ಗಿರೀಶ್ ಮುಂತಾದವರು ಈ ಸಂದರ್ಭದಲ್ಲಿದ್ದರು.

Facebook Comments