ಜನಮಾನಸದಲ್ಲಿ ನೆಲೆಯೂರಿದ್ದ ಪಾಪು

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮಾ.17- ಒಂದು ಶತಮಾನಕ್ಕೂ ಅಧಿಕ ಕಾಲ ಬಾಳಿ ಬದುಕಿ, ಮೂರ್ನಾಲ್ಕು ಪೀಳಿಗೆಯ ಕೋಟ್ಯಂತರ ಜನರನ್ನು ಕನ್ನಡ ನಾಡು-ನುಡಿ-ಭಾಷೆ ಹಾಗೂ ಸದಾ ಜನಪರ ಹೋರಾಟದ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದ ಪಾಟೀಲ ಪುಟ್ಟಪ್ಪ ಅವರ ಅಂತ್ಯ ಸಂಸ್ಕಾರವನ್ನು ವೀರಶೈವ ಲಿಂಗಾಯತ ಧರ್ಮದ ಅನ್ವಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಹಲಗೇರಿಯಲ್ಲಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಾಲ್ಯದ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಪಾಪು ತಮ್ಮ ಕರ್ಮಭೂಮಿಯಾದ ಹಲಗೇರಿಯಲ್ಲಿ ಸಂಜೆ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ. ಸದಾ ಕನ್ನಡ ಪರ ಹೋರಾಟ ಮಾಡುತ್ತಲೇ ಕನ್ನಡ ನಾಡು-ನುಡಿ, ಜಲದ ಪರವಾಗಿ ಔನ್ನತ್ಯ ತಲುಪುವ ವಿರಳ ಸಾಧಕರನ್ನು ಲಿಂಗಾಯತ ಸಮುದಾಯದವರಂತೆ ಕ್ರಿಯಾಸಮಾಧಿ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

ಶತಾಯುಷಿ ಪಾಟೀಲ ಪುಟ್ಟಪ್ಪ ಅವರನ್ನು ಕ್ರಿಯಾ ಸಮಾಧಿ ಮೂಲಕ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದ ಪಾಪು ಅವರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು. ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ನೂರಾರು ಮಠಗಳ ಹರಗುರು ಚರಮೂರ್ತಿಗಳು, ಶ್ರೀಮಠದ ಅನ್ನ-ಅಕ್ಷರ-ಆಶ್ರಯ ಪಡೆದಿರುವ ಸಾವಿರಾರು ಕನ್ನಡ ಹೋರಾಟಗಾರರ ಜತೆಗೆ ಬದುಕು ಕಟ್ಟಿಕೊಂಡಿರುವ ಅಸಂಖ್ಯಾತ ಅಭಿಮಾನಿಗಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವರು.

ಇದಕ್ಕೂ ಮುನ್ನ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಕನ್ನಡ ಪರ ಹೋರಾಟಗಾರರು, ಗಣ್ಯರು ಅವರ ಅಭಿಮಾನಿಗಳು, ಸ್ವಾಮೀಜಿಗಳು ಹುಬ್ಬಳ್ಳಿಯ ಮನೆಯಲ್ಲಿ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಾಟೀಲ ಪುಟ್ಟಪ್ಪ ಅವರ ಅಂತಿಮ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಆಗಮಿಸಿದ ಅಪಾರ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ನಂತರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತು ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ಅಂತಿಮ ಗೌರವ ಸಲ್ಲಿಸಿದರು.

# ಅಂತ್ಯ ಸಂಸ್ಕಾರ ವಿಧಿ-ವಿಧಾನ:
ವೀರಶೈವ ಲಿಂಗಾಯತ ಧರ್ಮದ ಅನ್ವಯ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸಾಂಗವಾಗಿ ಅಂತಿಮ ಪೂಜ ವಿಧಿ-ವಿಧಾನಗಳನ್ನು ನೆರವೇರಿಸಲಾಗುವುದು.  ಮೊದಲಿಗೆ ಜಂಗಮ ಪಾದೋದಕ ಮುಖಾಂತರ (ಶ್ರೀಗಳು ಬದುಕಿದ್ದಾಗ ಪಾದ ತೊಳೆದ ಜಲ) ಸ್ಥಳ ಶುದ್ಧಿ ಮೂಲಕ ಅಂತಿಮ ವಿಧಿ-ವಿಧಾನಗಳ ಮೂಲಕ ಗಂಗಾಪೂಜೆ, ಗಣಪತಿ ಪೂಜೆ, ಜ್ಯೋತಿ ಪೂಜೆ, ಪುಣ್ಯಾಹ, ನಾಂದಿ, ಪಂಚಕಲಶ ಪ್ರತಿಷ್ಠಾಪನೆ, ವಾಸ್ತು ಪೂಜೆ, ಏಕಾದಶರುದ್ರ ಪೂಜೆ, ದಶ ದಿಕ್ಪಾಲಕರ ಪೂಜೆ, ಪಂಚಕಲಶ, ನಿರಂಜನ ಜಂಗಮ ಕಲಶ ಪೂಜೆ, ಮಂಟಪ (ಗದ್ದುಗೆ) ಪೂಜೆ, ಶಿವಯೋಗ ಪೀಠ ಪೂಜೆ, ರುದ್ರ ಕಲಶ ಪೂಜೆಗಳನ್ನು ನೆರವೇರಿಸುವ ಮೂಲಕ ಸ್ಥಳ ಶುದ್ಧಿ ಮಾಡಲಾಗುತ್ತದೆ. ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಳಗ್ಗೆ ಮೂರುಸಾವಿರ ಮಠದ ಶ್ರೀಗಳಾದ ಗುರುರಾಜ ಯೋಗೀಂದ್ರ ಸ್ವಾಮೀಜಿ, ವಿಜಯಾಪುರ ಮಠದ ಸಿದ್ದೇಶ್ವರ ಶ್ರೀಗಳು, ಸಚಿವ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಶ್ರೀನಿವಾಸ್ ಮಾನೆ, ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಗಣ್ಯರು, ಮಠಾಧಿಪತಿಗಳು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳ ಹೋರಾಟಗಾರರು, ನಾಗರಿಕ ಸಂಘಟನೆಗಳ ಪದಾಧಿಕಾರಿಗಳು, ಅನೇಕರು ಅಂತಿಮ ದರ್ಶನ ಪಡೆದು ಪಾಪು ನಿಧನಕ್ಕೆ ಕಂಬನಿ ಮಿಡಿದರು.

Facebook Comments