ಪವನ್‍ ಕಲ್ಯಾಣ್ ಹುಟ್ಟುಹಬ್ಬದ ಪೋಸ್ಟರ್ ಹಾಕಲು ಹೋದ 3 ಯುವಕರು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ತೂರು,ಸೆ.2- ಪವರ್ ಸ್ಟಾರ್ ಎನಿಸಿಕೊಂಡಿರುವ ತೆಲುಗು ಚಿತ್ರರಂಗದ ನಟ, ರಾಜಕಾರಣಿ ಪವನ್‍ಕಲ್ಯಾಣ್ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಹಾಕುತ್ತಿದ್ದ ಮೂವರು ಯುವಕರು ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ.

ರಾಜೇಂದ್ರ ಪ್ರಸಾದ್ (31), ಸೋಮಶೇಖರ್ (29), ಅರುಣಾಚಲಂ (20) ಮೃತರು. ಪವನ್, ಹರಿ, ಸಂತೋಷ್, ಸುಬ್ರಹ್ಮಣ್ಯ ಗಾಯಾಳುಗಳು. ನಾಲ್ವರು ಗಾಯಾಳುಗಳನ್ನು ಕುಪ್ಪಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.

ಬ್ಯಾನರ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ ಹಿನ್ನೆಲೆ ಈ ಅವಘಢ ಸಂಭವಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಾಂತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾವೈರಸ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸರಳವಾಗಿರಲಿ ಎಂದು ಎಲ್ಲಾ ಸ್ಟಾರ್ ನಟ, ನಟಿಯರು ಮನವಿ ಮಾಡಿಕೊಂಡಿದ್ದಾರೆ. ದೊಡ್ಡ ಕಟೌಟ್, ಪೋಸ್ಟರ್ ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ.

ಚಿತ್ತೂರು ಜಿಲ್ಲೆಯ ಶಾಂತಿಪುರಂ ತಾಲೂಕಿನ ಕನಮಲದೊಡ್ಡಿ ಗ್ರಾಮದಲ್ಲಿ ಪವನ್ ಕಲ್ಯಾಣ್ ಅವರ 40 ಅಡಿ ಎತ್ತರದ ಪೋಸ್ಟರ್ ಹಾಕಲು ಒಟ್ಟು ಏಳು ಮಂದಿ ಯತ್ನಿಸಿದ್ದರು. ಇನ್ನೇನು ಪೋಸ್ಟರ್ ಹಾಕಿ ಮುಗಿಸುತ್ತಿದ್ದಂತೆ, ಮೃತರ ಪೈಕಿ ಒಬ್ಬಾತ ಪಕ್ಕದಲ್ಲಿದ್ದ 6.5 ಕೆವಿ ಎಲೆಕ್ಟ್ರಿಕ್ ತಂತಿಯನ್ನು ಮುಟ್ಟಿದ್ದಾನೆ, ನಂತರ ಹತ್ತಿರದಲ್ಲಿದ್ದ ಆತನ ಸೋದರ ಹಾಗೂ ಒಬ್ಬ ಸ್ನೇಹಿತನಿಗೂ ವಿದ್ಯುತ್ ಹರಿದಿದೆ. ಮೂವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ ಎಂದು ಕುಪ್ಪಂ ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ಹೇಳಿದ್ದಾರೆ.

ಮೃತರನ್ನು ಸೋಮಶೇಖರ್ (30), ರಾಜಶೇಖರ್ (32) ಮತ್ತು ಅರುಣಾಚಲಂ (28) ಎಂದು ಗುರುತಿಸಲಾಗಿದೆ. ಕುಪ್ಪಂನ ಕೃಷ್ಣಗಿರಿ-ಪಾಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟೌಟ್ ದೊಡ್ಡದಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಈ ಘಟನೆ ಬಗ್ಗೆ ನಟ ಮತ್ತು ಜನ ಸೇನಾ ಪಾರ್ಟಿ(ಜೆಎಸ್ ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಜನ ಸೇನಾ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.

Facebook Comments