‘ಮಹಾ’ಸರ್ಕಾರ ರಚನೆ ಬಿಕ್ಕಟಿಗೆ ಹೊಸ ಟ್ವಿಸ್ಟ್, ಸೋನಿಯಾ-ಶರತ್ ಭೇಟಿ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.18- ಶಿವಸೇನೆ ತನ್ನ ದಾರಿಯನ್ನು ತಾನು ನೋಡಿಕೊಳ್ಳಲಿ. ನಾನು ನಮ್ಮ ರಾಜಕೀಯ ಮಾಡುತ್ತೇವೆ ಎಂದು ಹೇಳುವ ಮೂಲಕ ಎನ್‍ಸಿಪಿಯ ಶರದ್ ಪವಾರ್ ಕುತೂಹಲ ಕೆರಳಿಸಿದ್ದಾರೆ. ಈ ನಡುವೆ ದೆಹಲಿಯಲ್ಲಿ ಎನ್‍ಸಿಪಿ ನಾಯಕ ಶರದ್ ಪವಾರ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡುವೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಲುವಾಗಿ ನಡೆಯಬೇಕಿದ್ದ ಸಭೆ ದಿಢೀರ್ ರದ್ದಾಗಿದೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮತ್ತೆ ಅನಿಶ್ಚಿತತೆಗೆ ಬಿದ್ದಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಿ ಶಿವಸೇನೆ-ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆಯಾಗಿ ಸರ್ಕಾರ ರಚನೆ ಕುರಿತಂತೆ ಕಳೆದ ಶುಕ್ರವಾರ ಸಭೆ ನಡೆದಿತ್ತು.ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೆ ವಿಸ್ತೃತ ರಚನೆ ನಡೆಸುವ ಕುರಿತಂತೆ ಶರದ್ ಪವಾರ್ ಅವರು ಭಾನುವಾರ ನವದೆಹಲಿಯಲ್ಲಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ಹಾಗಾಗಿ ನಿನ್ನೆ ನಡೆಯಬೇಕಿದ್ದ ಸಭೆ ಇಂದಿಗೆ ಮುಂದೂಡಿಕೆ ಆಗಿತ್ತು.

ಇಂದು ಸಂಜೆ 3 ಗಂಟೆಗೆ ಇಬ್ಬರೂ ನಾಯಕರು ಸಭೆ ನಡೆಸಲು ಸಮಯ ನಿಗದಿಯಾಗಿತ್ತು. ಆದರೆ ಕಟ್ಟಾ ಹಿಂದೂ ವಾದಿ ಶಿವಸೇನೆ ಜೊತೆ ಗುರುತಿಸಿಕೊಂಡರೆ ಜಾತ್ಯತೀತ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸಭೆ ಅನಿರ್ದಿಷ್ಠಾವಧಿಗೆ ಮುಂದೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಶರದ್ ಪವಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್-ಎನ್‍ಸಿಪಿ ಮತ್ತು ಶಿವಸೇನೆ ಜೊತೆ ಸೇರಿ ಸರ್ಕಾರ ರಚಿಸಲಿವೆಯೇ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ.ಶಿವಸೇನೆ ಸರ್ಕಾರ ರಚಿಸುವುದಾಗಿ ಹೇಳಿಕೊಳ್ಳುತ್ತಿದೆ ಎಂದು ಸುದ್ದಿಗಾರರು ಹೇಳಿದಾಗ ಅವರು ಅವರ ದಾರಿಯನ್ನು ನೋಡಿಕೊಳ್ಳಲಿ ನಾನು ನಮ್ಮ ರಾಜಕೀಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರ ರಚನೆ ಬಗ್ಗೆ ಇತ್ತೀಚೆಗಷ್ಟೇ ಶಿವಸೇನೆಯ ಸಂಜಯ್ ರಾವತ್ ಹೇಳಿಕೆ ನೀಡಿ 5 ವರ್ಷ ಕಾಲ ಶಿವಸೇನೆಯೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದೆ. ಮುಂದಿನ 25 ವರ್ಷ ಕಾಲ ಶಿವಸೇನೆಯೇ ಅಧಿಕಾರದಲ್ಲಿರುತ್ತದೆ ಎಂದು ಹೇಳಿದ್ದರು.

ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಮತ್ತು ಬಿಜೆಪಿ ಒಟ್ಟು 161 ಸ್ಥಾನ ಗೆದ್ದಿದ್ದವು. 105 ಸ್ಥಾನ ಗೆದ್ದಿದ್ದ ಬಿಜೆಪಿಗೆ ಸವಾಲು ಹಾಕಿದ್ದ 56 ಸ್ಥಾನ ಗೆದ್ದಿದ್ದ ಶಿವಸೇನೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿತ್ತು.

ಹೀಗಾಗಿ ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಮುರಿದು ಬಿದ್ದಿತ್ತು. ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ನಡುವೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಕಸರತ್ತು ನಡೆದಿತ್ತು.
ಈಗ ಈ ಮೈತ್ರಿಯ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

Facebook Comments