‘Paytm ಎಂದರೆ, ಪೇ ಟು ಮೋದಿ ಎಂದರ್ಥ’ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Paytm-Rahul-Modi--01

ನವದೆಹಲಿ, ಡಿ.8- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿರುವುದರಿಂದ ದೇಶವು ವಿನಾಶದತ್ತ ಸಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ 14 ಪ್ರತಿಪಕ್ಷಗಳ 200ಕ್ಕೂ ಹೆಚ್ಚು ಸಂಸದರು ಮತ್ತು ಮುಖಂಡರು ಇಂದು ಸಂಸತ್ ಆವರಣದಲ್ಲಿ ಕಪ್ಪುಪಟ್ಟಿ ಧರಿಸಿ ಭಾರೀ ಪ್ರತಿಭಟನಾ ಧರಣಿ ನಡೆಸಿದರು.
ಕಳೆದ ಸತತ 15 ದಿನಗಳಿಂದಲೂ ಸಂಸತ್ತಿನಲ್ಲಿ ಕಲಾಪಗಳಿಗೆ ಅಡ್ಡಿ ಉಂಟು ಮಾಡಿ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳು ಮತ್ತೊಮ್ಮ ಸಂಸತ್ತಿನ ಹೊರಗೆ ಹರತಾಳ ನಡೆಸಿ ಗಮನ ಸೆಳೆದವು.
ಪ್ರಧಾನಿಯವರು ಸಂಸತ್ತಿನಲ್ಲಿ ಈ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ತಮ್ಮ ಬಿಗಿಪಟ್ಟನ್ನು ಮುಂದುವರಿಸಿವೆ ಇದರೊಂದಿಗೆ ಸಂಸತ್‍ನಲ್ಲಿ ಜಿಎಸ್‍ಟಿ ಸೇರಿದಂತೆ ಇತರ ಮಹತ್ವದ ಮಸೂದೆಗಳ ಅನುಮೋದನೆ ಸಾಧ್ಯತೆ ಕ್ಷೀಣಿಸಿದೆ.

ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಬೆಳಗ್ಗೆಯೇ 14 ವಿರೋಧಪಕ್ಷಗಳ ಸಂಸದರು ಮತ್ತು ಮುಖಂಡರು ಸಂಸತ್ ಆವರಣದಲ್ಲಿ ಸಮಾವೇಶಗೊಂಡು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.
ಕೇಂದ್ರ ಸರ್ಕಾರದ ದಿಢೀರ್ ನೋಟು ರದ್ದತಿ ನಿರ್ಧಾರ, ಪ್ರಧಾನಿ ಈವರೆಗೆ ಸಂಸತ್ತಿನಲ್ಲಿ ಉತ್ತರ ನೀಡದ ಧೋರಣೆ ಹಾಗೂ ಪ್ರತಿಭಟನಾನಿರತ ಪ್ರತಿಪಕ್ಷಗಳ ಮುಖಂಡರನ್ನು ಕಾಳ ಧನಿಕರ ಬೆಂಬಲಿಗರು ಎಂದು ಟೀಕಿಸಿರುವುದಕ್ಕೆ ಪ್ರಧಾನಿ ಕ್ಷಮೆ ಯಾಚಿಸಬೇಕು ಎಂಬ ಮುಖ್ಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಸದಸ್ಯರು ಧರಣಿ ನಡೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೋಟು ರದ್ದತಿಯು ತಮ್ಮ ದಿಟ್ಟತನದ ಕ್ರಮ ಎಂದು ಹೇಳಿಕೊಳ್ಳುತ್ತಿರುವ ಮೋದಿಯವರದು ಮೂರ್ಖತನದ ನಿರ್ಧಾರ ಎಂದು ರಾಹುಲ್ ಕಟುವಾಗಿ ಟೀಕಿಸಿದರು.

ಪ್ರಧಾನಿಯವರು ಸಂಸತ್ತಿನಲ್ಲಿ ಈ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಉತ್ತರ ನೀಡಬೇಕು. ಅವರು ಇದರಿಂದ ತಪ್ಪಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಮೋದಿ ಕಲಾಪದಲ್ಲಿ ಚರ್ಚೆಗೆ ಬರಲಿ. ದೇಶದ ಜನರು ಯಾವ ರೀತಿ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ನಾವು ಅವರಿಗೆ ಅರ್ಥ ಮಾಡಿಸುತ್ತೇವೆ ಎಂದು ರಾಹುಲ್ ಹೇಳಿದರು.  ಮೋದಿಯವರ ನಿರ್ಧಾರದಿಂದ ದೇಶವು ವಿನಾಶದತ್ತ ಸಾಗಿದೆ. ನೋಟು ರದ್ದತಿಯಿಂದ ದೇಶಾದ್ಯಂತ ಭಾರೀ ನಷ್ಟವಾಗಿದೆ. ಬಡವರು, ರೈತರು, ಶ್ರಮಿಕ ವರ್ಗದವರಿಗೆ ತುಂಬಾ ತೊಂದರೆಯಾಗಿದೆ. ಮುಂದಾಲೋಚೆನ ಇಲ್ಲದೇ ಈ ಮೂರ್ಖತನದ ನಿರ್ಧಾರ ಕೈಗೊಳ್ಳಲಾಗಿದೆ. ಇದೊಂದು ಕೆಲಸಕ್ಕೆ ಬಾರದ ನಿರ್ಧಾರ ಎಂದು ವ್ಯಂಗ್ಯವಾಡಿದರು.

ನಗದುರಹಿತ ವ್ಯಾಪಾರ-ವಹಿವಾಟಿನಿಂದ ಕೇವಲ ನಾಲ್ಕೈದು ಕಂಪನಿಗಳಿಗೆ ಮಾತ್ರ ಲಾಭವಾಗುತ್ತದೆ. ಪೇಟಿಎಂ (Paytm) ಎಂದರೆ ಪೇ ಟು ಮೋದಿ ಎಂದರ್ಥ ಎಂದು ರಾಹುಲ್ ಲೇವಡಿ ಮಾಡಿದರು.  ವಿವಿಧ ಪಕ್ಷಗಳ ಮುಖಂಡರು ಸಹ ಈ ಸಂದರ್ಭದಲ್ಲಿ ಮಾತನಾಡಿ ಮೋದಿ ಮತ್ತು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿದರು.  ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ಪ್ರತಿಭಟನೆ ಮತ್ತು ಧರಣಿಯನ್ನು ಮುಂದುವರಿಸಿರುವುದರಿಂದ ಸಂಸತ್‍ನಲ್ಲಿ ಜಿಎಸ್‍ಟಿ ಸೇರಿದಂತೆ ಇತರ ಮಹತ್ವದ ಮಸೂದೆಗಳ ಅನುಮೋದನೆ ಸಾಧ್ಯತೆ ಕ್ಷೀಣಿಸಿದೆ.
ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಮಸೂದೆ, ವಿಕಲಾಂಗ ವ್ಯಕ್ತಿಗಳು, ನೌಕರರ ಪ್ರಯೋಜನಗಳು, ಹೆರಿಗೆ ಸೌಲಭ್ಯ ವಿಧೇಯಕಗಳೂ ಸೇರಿದಂತೆ ಅನೇಕ ವಿಧೇಯಕಗಳು ಅನುಮೋದನೆಗೆ ಬಾಕಿ ಇವೆ. ವಿರೋಧಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವುದರಿಂದ ಈ ಮಸೂದೆಗಳಿಗೆ ಅಂಗೀಕಾರ ಲಭಿಸುವ ಸಾಧ್ಯತೆ ಕಡಿಮೆಯಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin