ಈ ಬಾರಿಯ ಟೈಟ್ ಲಾಕ್‌ಡೌನ್‌ಗೆ ಬೆಚ್ಚಿ ಬಿದ್ದು ಬೆಂಗಳೂರು ಬಿಟ್ಟು ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.14- ಈ ಬಾರಿ ಕಳೆದ ಬಾರಿಗಿಂತ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ಪರಿಣಾಮ ಜನತೆ ಕೂಡಾ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರು ಸಹವಾಸ ಸಾಕಪ್ಪ ಎಂದು ಗಂಟು ಮೂಟೆ ಸಮೇತ ತಮ್ಮೂರುಗಳತ್ತ ಮುಖ ಮಾಡಿದ್ದಾರೆ.

ನಿನ್ನೆ ಮುಂಜಾನೆ 5 ಗಂಟೆಯಿಂದ ಗುಳೆ ಹೊರಡುವುದು ಪ್ರಾರಂಭವಾಗಿದ್ದು, ಜನರು ತಮ್ಮ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ಸ್ವಂತ ವಾಹನಗಳು, ಕಾರು, ಕ್ಯಾಂಟರ್, ಟಾಟಾ ಏಸ್ ವಾಹನಗಳಲ್ಲಿ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ.

ನಿನ್ನೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದರು. ಹೀಗಾಗಿ ಪ್ರತಿ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಗೊರಗೊಂಟೆಪಾಳ್ಯ, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಂದೂ ಕೂಡ ಊರುಗಳಿಗೆ ತೆರಳಲು ಜನರು ನಿಂತಿದ್ದಾರೆ.

ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರಿಗೂ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳುಹಿಸುತ್ತಿದ್ದಾರೆ. ಹೆಚ್ಚುವರಿ ಬಸ್‍ಗಳ ನಿಯೋಜನೆ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿದೆ.

ಮುಂಜಾನೆಯಿಂದಲೇ ನೆಲಮಂಗಲ ರಸ್ತೆಯ ನವಯುಗ ಟೋಲ್‍ನಲ್ಲಿ ವಾಹನ ದಟ್ಟಣೆ ಶುರುವಾಗಿದೆ. ರಾತ್ರಿಯಿಂದ ನವಯುಗ ಟೋಲ್ ಹಣ ಸಂಗ್ರಹ ಮಾಡುತ್ತಿಲ್ಲ. ಲಾಕ್‍ಡೌನ್ ಹಿನ್ನೆಲೆ ವಾಹನ ಸವಾರರಿಂದ ಯಾವುದೇ ಸುಂಕ ಕಲೆಕ್ಟ್ ಮಾಡುತ್ತಿಲ್ಲ.

ಇಂದು ರಾತ್ರಿ 8 ಗಂಟೆಯವರೆಗೆ ಹಣ ಸಂಗ್ರಹ ಮಾಡದಿರಲು ಆದೇಶ ಬಂದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ನಿರಂತರವಾಗಿ ವಾಹನಗಳ ಓಡಾಡುತ್ತಿವೆ.

ಇಂದು ಸಹ ಸ್ವಂತ ವಾಹನಗಳಲ್ಲಿ ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ಲಗೇಜ್ ಆಟೋ, ಬೈಕ್, ಕಾರುಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಲು ಬಂದಿದ್ದ ಜನರು, ಕೊರೋನಾ ಸೋಂಕಿನಿಂದ ಭಯಬಿದ್ದಿದ್ದಾರೆ.

ಅಷ್ಟೆ ಅಲ್ಲ ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು ಕೂಲಿ ನಾಲಿಯಿಲ್ಲದೆ ನಗರ ಬಿಟ್ಟು ಹಳ್ಳಿಗಳನ್ನ ಸೇರುವ ಪರಿಸ್ಥಿತಿಯಿಂದ ಬದುಕಿದರೆ ಸಾಕು ಹೇಗೋ ಊರಿನಲ್ಲಿ ಜೀವನ ಮಾಡುತ್ತೇವೆ ಎಂಬ ಆತಂಕದಿಂದಲೇ ಊರುಗಳತ್ತ ಗುಳೆಹೊರಟಿದ್ದಾರೆ.

ಒಮ್ಮೆಲೆ ಸಾಕಷ್ಟು ಜನ ಬೆಂಗಳೂರು ತೊರೆಯಲು ಪ್ರಾರಂಭಿಸಿದ ಹಿನ್ನೆಲೆ ಟೋಲ್ಗಳಲ್ಲಿ ಟ್ರಾಫಿಕ್ ಉಂಟಾಗಿತ್ತು, ಇದನ್ನ ಗಮನಿಸಿದ ಪೆÇಲೀಸ್ ಇಲಾಖೆ ಮುಂದಿನ ಆದೇಶದವರೆಗೂ ತುಮಕೂರು ರಸ್ತೆಯ ನವಯುಗ ಸೇರಿದಂತೆ ಹಾಸನ ರಸ್ತೆಯ ಲ್ಯಾಂಕೋ ಟೋಲ್‍ನಲ್ಲಿ ಸುಂಕ ವಸೂಲಾತಿಗೆ ಬ್ರೇಕ್ ಹಾಕಿದೆ.

ಗುಳೆ ಹೊರಟಿರುವವರಲ್ಲಿ ಬಹುತೇಕರು ನಿನ್ನೆಯೇ ತಮ್ಮ ಮನೆಯಲ್ಲಿದ್ದ ಲಗೇಜ್‍ಗಳನ್ನು ಕಳುಹಿಸಿ ಇಂದು ತಮ್ಮಲ್ಲಿ ಬೈಕ್ ಕಾರುಗಳಲ್ಲಿ ಊರಿನತ್ತ ಮುಖ ಮಾಡಿದ್ದಾರೆ. ಇಂದು ರಾತ್ರಿ 8 ಗಂಟೆವರೆಗೂ ಎಲ್ಲರಿಗೂ ಆವಕಾಶ ಇದ್ದು, ಇಂದು ಸಹ ಸಾಗರೋಪಾದಿಯಲ್ಲಿ ಜನ ಬೆಂಗಳೂರು ಬಿಟ್ಟು ತಮ್ಮೂರುಗಳತ್ತ ಹೊರಟಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್‍ ಪೋಸ್ಟ್ ಮೂಲಕ ಮುಂಜಾನೆಯಿಂದಲೇ ಸಾವಿರಾರು ಮಂದಿ ಗಂಟು ಮೂಟೆ ಸಮೇತ ತಮ್ಮ ಗ್ರಾಮಗಳತ್ತ ಹೊರಟಿದ್ದಾರೆ. ವಾರದ ಹಿಂದೆ ಇದೇ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ಹತ್ತು ಸಾವಿರಕ್ಕೂ ಅಧಿಕ ಮಂದಿ ರಾಜ್ಯ ಪ್ರವೇಶ ಮಾಡಿದ್ದರು.

ಹಿಂದೆ ಜಾರಿಗೊಳಿಸಿದ್ದ ತಿಂಗಳಿಗೂ ಅಧಿಕ ಸುದೀರ್ಘ ಲಾಕ್ಡೌನ್ನಿಂದ ಬೇರೆ ಬೇರೆ ರಾಜ್ಯದ ಜನ ಮೂಲಭೂತ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದರು. ಇತ್ತ ಇದ್ದ ಕಡೆಯು ನೆಮ್ಮದಿಯಾಗಿ ಜೀವಿಸುವಂತಿಲ್ಲ, ಅತ್ತ ತಮ್ಮ ಊರುಗಳಿಗೂ ಹೋಗುವಂತಿಲ್ಲ. ಜನರು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿತ್ತು.

ಹಾಗಾಗಿ, ಜನ ಲಾಕ್ ಡೌನ್ ಗೂ ಮೊದಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುವ ಧಾವಂತದಲ್ಲಿದ್ದರು. ಅಂದಹಾಗೆ, ಈಗಾಗಲೇ ಅಂತರ್ ರಾಜ್ಯಕ್ಕೆ ಪ್ರಯಾಣಿಸುವ ಸರ್ಕಾರಿ ವಾಹನಗಳು ಸಹ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು, ರಾಜ್ಯದ ಗಡಿಯಲ್ಲಿ ಇಳಿದು ತಮಿಳುನಾಡು ಗಡಿಯತ್ತ ಜನ ನಡೆದೇ ಸಾಗುತ್ತಿದ್ದಾರೆ. ಮಕ್ಕಳು, ವೃದ್ಧರು ಎನ್ನದೆ ಎಲ್ಲರೂ ತಮ್ಮ ತಮ್ಮ ಊರುಗಳತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

8ನೇ ಮೈಲಿ ಜಾಲಹಳ್ಳಿ ಹೆಸರಘಟ್ಟ ಭಾಗದ ಕೆಲ ಜನರು ತಮ್ಮ ಲಗೇಜ್ಗಳನ್ನ ವಾಹನಗಳಲ್ಲಿ ಕಳುಹಿಸಿ ಕೆಎಸ್‍ಆರ್‍ಟಿಸಿ ಸ್‍ನಲ್ಲಿ ತಮ್ಮೂರುಗಳಿಗೆ ತೆರಳಲು ನವಯುಗ ಟೋಲ್‍ಗಳ ಬಳಿ ನಿಂತಿದ್ದರು.

ಆದರೆ, ಬಸ್‍ಗಳಲ್ಲಿ ಸೋಂಕು ಹರಡದಂತೆ ಕ್ರಮ ವಹಿಸಿದ ಸಲುವಾಗಿ ಸೀಮಿತ ಸೀಟುಗಳಿಗೆ ಅವಕಾಶ ಮಾತ್ರ ಕಲ್ಪಿಸಿರುವುದರಿಂದ ಬಹುತೇಕ ಬಸ್ಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಭರ್ತಿಯಾಗಿ ಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ಕಾಯ್ದ ಜನರು ಬಂದ ದಾರಿಗೆ ಸುಂಕ ಇಲ್ಲ ಎಂದುಕೊಂಡು ಮತ್ತೆ ಮೆಜೆಸ್ಟಿಕ್ ಕಡೆ ಪ್ರಯಾಣ ಬೆಳೆಸಿ ತಮ್ಮ ಊರುಗಳಿಗೆ ತೆರಳುವ ಬಸ್ ಹತ್ತಿ ಹೊರಟರು.

Facebook Comments

Sri Raghav

Admin