ಫ್ರೀ ಹಾಲು-ರೇಷನ್ ಗಾಗಿ ಗೋಗರೆಯುತ್ತಿದ್ದವರು ಇಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 4- ಇಷ್ಟು ದಿನ ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ, ಬಡತನವಿದೆ, ಒಂದೊತ್ತಿನ ಊಟಕ್ಕೂ ಗತಿಯಿಲ್ಲ. ರೇಷನ್ ಕೊಡಿ, ಮಕ್ಕಳಿಗೆ ಹಾಲು ಕೊಡಿ ಎಂದು ಗೋಗರೆಯುತ್ತಿದ್ದ ಬಹುತೇಕ ಜನ ಇಂದು ದಿಢೀರೆಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದರು!

ಸರ್ಕಾರ ಇದುವರಗೆ ಉಚಿತವಾಗಿ ಹಾಲು, ದಿನಸಿ ಕೊಟ್ಟಿದೆ. ಸ್ವಯಂಸೇವಾ ಸಂಸ್ಥೆಗಳವರು ಹಸಿದವರಿಗೆ ಅನ್ನ, ಆಹಾರಗಳನ್ನು ಸಾಧ್ಯವಾದಷ್ಟು ನೀಡಿದ್ದಾರೆ. ಲಾಕ್‍ಡೌನ್ ಸಡಿಲಗೊಂಡು ಮದ್ಯದಂಗಡಿ ಓಪನ್ ಆಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಲಿಂಗಬೇಧ ಮರೆತು ಸರದಿ ಸಾಲಿನಲ್ಲಿ ನಿಂತು ಹಣ ಕೊಟ್ಟು ಹೆಚ್ಚೆಚ್ಚು ಮದ್ಯ ಪಡೆಯುತ್ತಿದ್ದುದು ಕಂಡು ಬಂತು. ಇದನ್ನು ನೋಡಿದರೆ ಇವರಿಗೇಕೆ ಸರ್ಕಾರದ ಉಚಿತ ಸೌಲಭ್ಯಗಳನ್ನು ಕೊಡಬೇಕು ಎಂಬ ಪ್ರಶ್ನೆ ಮೂಡುತ್ತದೆ.

ಬಡ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಸರ್ಕಾರ ಲಾಕ್‍ಡೌನ್ ಸಂದರ್ಭದಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಬಿಪಿಎಲ್ ಕಾರ್ಡ್‍ದಾರರಿಗೆ 2 ತಿಂಗಳ ರೇಷನ್, ಎಪಿಎಲ್ ಕಾರ್ಡ್‍ದಾರರಿಗೂ ಕೂಡ ಕಡಿಮೆ ದರದಲ್ಲಿ ಅಕ್ಕಿ, ಕಾರ್ಮಿಕರಿಗೆ ಒಂದು ಸಾವಿರ ಮೌಲ್ಯದ ದಿನಸಿ ಪದಾರ್ಥ, ಜನಧನ್ ಖಾತೆಗೆ ಹಣ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ಸರ್ಕಾರ ಮಾಡಿದರೆ; ಜನಪ್ರತಿನಿಧಿಗಳು ಪ್ರತ್ಯೇಕವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.

ಇದಲ್ಲದೆ ಸಂಘ, ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಕೂಡ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ಆದರೆ ಇಂದು ಮದ್ಯದಂಗಡಿಗಳ ಮುಂದೆ ಬಹುತೇಕರು ಹಣ ಹಿಡಿದು ಸರದಿ ಸಾಲಿನಲ್ಲಿ ನಿಂತಿದ್ದರು. ಮದ್ಯ ಖರೀದಿಸಲು ಬರುವ ಪ್ರತಿಯೊಬ್ಬರ ಕೈಗೆ ಸರ್ಕಾರ ಅಳಿಸಲಾಗದ ಶಾಯಿಯಿಂದ ಗುರುತು ಹಾಕಬೇಕು.

ಈ ಗುರುತು ಇದ್ದವರಿಗೆ ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಉಚಿತ ಊಟ, ಆಹಾರದ ಕಿಟ್ ನೀಡಬಾರದು. ಕುಡಿಯಲು ಬೇಕಾದಷ್ಟನ್ನು ಖರೀದಿಸುವವರಿಗೆ ದಾನ ಏಕೆ ಮಾಡಬೇಕೆಂದು ಹಲವು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin