ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಕಂಗಾಲಾದ ಜನಸಾಮಾನ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.13- ಇಂದು ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಕೊರೋನಾ ಹಾಗೂ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ದೇಶದ ಜನತೆ ಇನ್ನಷ್ಟು ಕೆಂಗೆಡುವಂತೆ ಮಾಡಿದೆ. ಈ ಮೂಲಕ ಭಾರತದಲ್ಲಿ ತೈಲದ ಬೆಲೆ ಈವರೆಗಿನ ಐತಿಹಾಸಿಕ ದಾಖಲೆ ಮಟ್ಟಕ್ಕೆ ಏರಿಕೆಯಾದಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಹೆಚ್ಚಳವಾದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಕಡಿಮೆಯಾದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿದೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯವನ್ನು ಮರೆತಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ. ಈ ಮೂಲಕ ಕೊರೋನಾ ಕಾಟದಿಂದಾಗಿ ಬಸವಳಿದಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ತಿಂಗಳು ಬರೊಬ್ಬರಿ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದೊಂದು ವಾರದಲ್ಲಿ ಮೂರು ಭಾರೀ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

ಮೊದಲು ಐದು ದಿನಗಳ ಹಿಂದೆ (ಜುಲೈ 7ರಂದು) ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿತ್ತು. ನಂತರ ನಿನ್ನೆ (ಜುಲೈ 12ರಂದು) ಮತ್ತೆ 16 ಪೈಸೆ ಬೆಲೆ ಏರಿಕೆ ಮಾಡಲಾಗಿತ್ತು.

ಈಗ ಮತ್ತೆ ಇಂದು ಪ್ರತಿ ಲೀಟರ್ ಡೀಸೆಲ್ ಗೆ 11 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್ ಗೆ 11.53 ರೂ. ಹೆಚ್ಚಳವಾದಂತಾಗಿದೆ.

Facebook Comments

Sri Raghav

Admin