ಡೀಸೆಲ್- ಪೆಟ್ರೋಲ್ ತೆರಿಗೆ ಕಡಿತಗೊಳಿಸುವಂತೆ ಸರ್ಕಾರಕ್ಕೆ ಶರವಣ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.11- ದೇಶದಲ್ಲಿ ತೈಲ ದರ ಮತ್ತೊಮ್ಮೆ ದಾಖಲೆ ಏರಿಕೆಯಾಗಿರುವುದರಿಂದ ಜನಸಾಮಾನ್ಯರ ಬದುಕು ದುರ್ಭರವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಾಯಕ ಟಿ.ಎ.ಶರವಣ ಟೀಕಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಕರೆದು, ಡೀಸೆಲ್, ಪೆಟ್ರೋಲ್ ಮೇಲೆ ಹಾಕಿರುವ ತೆರಿಗೆಯನ್ನು ರದ್ದು ಪಡಿಸಬೇಕು. ಇದರಿಂದ ತೈಲ ದರ ಏರಿಕೆ ಕೊಂಚ ಮಟ್ಟಿಗೆ ಕಡಿಮೆ ಆಗಿ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದಿದ್ದಾರೆ.

ಪೆಟ್ರೋಲ್ ಜೊತೆ ಜೊತೆಗೆ ಡೀಸೆಲ್ ದರ ಕೂಡ ಶತಕ ಬಾರಿಸುವ ಮೂಲಕ ಬಡವರು, ಮಧ್ಯಮ ವರ್ಗದ ಜನರು ಬೆಚ್ಚಿ ಬೀಳಿಸುವ ವಾತಾವರಣ ಉಂಟಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ದರ ಏರಿಕೆಯಿಂದ ಬಡವರ ಮತ್ತು ಮಧ್ಯಮವರ್ಗದ ಬದುಕುಗಳು ಛಿದ್ರಗೊಂಡಿದ್ದು , ದೈನಂದಿನ ಚಟುವಟಿಕೆ ಮೇಲೆ ಮತ್ತೊಮ್ಮೆ ಬರೆ ಬಿದ್ದಿದೆ. ರಾಜ್ಯ ವಿಸುತ್ತಿರುವ ತೆರಿಗೆ ಕಡಿಮೆ ಮಾಡದಿದ್ದರೆ ಜಾತ್ಯತೀತ ಜನತಾದಳ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ಬಡವರು, ಮಧ್ಯಮ ವರ್ಗದ ಜನರ ಬದುಕಿಗೆ ಕೊಳ್ಳಿ ಇಟ್ಟು ಇನ್ನಷ್ಟು ದುಸ್ತರ ಮಾಡುವುದೇ ಪ್ರಧಾನಿ ನರೇಂದ್ರಮೋದಿ ಅವರ ಅಚ್ಚೆ ದಿನ್ ಇರಬಹುದೇ ಎಂಬ ಗುಮಾನಿ ಉಂಟಾಗಿದೆ ಎಂದು ಟೀಕಿಸಿದ್ದಾರೆ. ಕಳೆದ ವಾರವಷ್ಟೇ ಅಡಿಗೆ ಅನಿಲ ದರ ಸತತ ಏರಿಕೆ ಆಗಿ ಸಿಲಿಂಡರ್ ಒಂದಕ್ಕೆ ಒಂದು ಸಾವಿರ ರೂಪಾಯಿನತ್ತ ದಾಪುಗಾಲು ಹಾಕಿದೆ. ಅದರ ಬೆನ್ನಲ್ಲೇ ಪೆಟ್ರೋಲ್ ಜತೆ ಡೀಸೆಲ್ ದರ ಕೂಡ ನೂರು ರೂಪಾಯಿ ಮೀರಿದ್ದು, ಇದರಿಂದ ಸರಕು ಸಾಕಾಣಿಕೆ ವೆಚ್ಚ ಹೆಚ್ಚಾಗಿ, ದಿನನಿತ್ಯದ ಅಗತ್ಯ ವಸ್ತುಗಳ ದರ ಏರಿಕೆಯಾಗಲಿದೆ. ಜನಸಾಮಾನ್ಯರು ಬದುಕಬೇಕೋ? ಬೇಡವೋ ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಡೀಸೆಲ್ ದರ ದಾಖಲೆ ಏರಿಕೆ ಆಗಿರುವುದರಿಂದ ಸಹಜವಾಗಿ ಪ್ರಯಾಣ ದರ ಅಷ್ಟೇ ಅಲ್ಲ, ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗಿ ದಿನೋಪಯೋಗಿ ವಸ್ತುಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೆ ಹೋಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದೀಗ ಪಲಾಯನ ನೀತಿ ಅನುಸರಿಸದೆ ತಕ್ಷಣ ಮದ್ಯ ಪ್ರವೇಶಿಸಿ ಜನರ ನೆರವಿಗೆ ಮುಂದಾಗಬೇಕು. ದರ ಏರಿಕೆ ನಿಯಂತ್ರಿಸಬೇಕು ಎಂದು ಶರವಣ ಆಗ್ರಹ ಪಡಿಸಿದ್ದಾರೆ.

ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವಂತೂ ನಿಯಂತ್ರಣ ಕಳೆದು ಕೊಂಡಿದ್ದು, ದರ ಏರಿಕೆಗೆ ತಾನು ಕಾರಣವಲ್ಲ ಎಂದು ಹೊಣೆಯಿಂದ ನುಣುಚಿ ಕೊಂಡಿದೆ. ಇಂಥ ಸಂದರ್ಭದಲ್ಲಿ ದುಬಾರಿ ಪ್ರವೇಶ ತೆರಿಗೆ ಹಾಕುವ ರಾಜ್ಯ ಸರ್ಕಾರ ತುರ್ತಾಗಿ ಮದ್ಯ ಪ್ರವೇಶ ಮಾಡಬೇಕು ಎಂದು ಟಿ. ಎ.ಶರವಣ ಒತ್ತಾಯಿಸಿದ್ದಾರೆ.

Facebook Comments