ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗಿಲ್ಲ ಕಡಿವಾಣ, ವಾಹನ ಸವಾರರು ಹೈರಾಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ. 5- ಕೊರೊನಾ ಲಾಕ್‍ಡೌನ್ ನಂತರ ಗಗನಮುಖಿಯಾಗಿ ಏರುತ್ತಲೇ ಇರುವ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕದೇ ಇರುವುದರಿಂದ ವಾಹನ ಸವಾರರು ಬಸವಳಿದಿದ್ದಾರೆ. ಹೊಸ ವರ್ಷದ ಆರಂಭದಿಂದಲೂ ಪ್ರತಿ ದಿನ 20 ರಿಂದ 40 ಪೈಸೆಯವರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡುತ್ತಲೇ ಬಂದಿದೆ.

ಇಂದು ಕೂಡ ಲೀಟರ್ ಪೆಟ್ರೋಲ್ ಮೇಲೆ 37 ಪೈಸೆ ಏರಿಕೆಯಾಗುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ ವಾಹನ ಸವಾರರು 89.85 ರೂ. ಹಾಗೂ ಡೀಸೆಲ್‍ಗೆ 81.76ರೂ.ಗಳನ್ನು ಕೊಡಬೇಕಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 2.5 ರೂ., ಡೀಸೆಲ್ ಮೇಲೆ 4 ರೂ. ಏರಿಕೆ ಮಾಡಿದರೂ ಆದರ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ ಎಂದು ಭರವಸೆ ನೀಡಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ದಿನೇ ದಿನೇ ಏರುಮುಖವಾಗುತ್ತಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಕೂಡ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕದೆ ಕೇಂದ್ರ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Facebook Comments