ಸಿಲಿಕಾನ್ ಸಿಟಿಯಲ್ಲೂ 90 ರೂ. ಸಮೀಪದಲ್ಲಿ ಪೆಟ್ರೋಲ್ ಬೆಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.27- ಈಗಾಗಲೇ ದೇಶದ ವಾಣಿಜ್ಯ ನಗರಿ ಮುಂಬೈ (92.86 ರೂ.) ಔರಂಗಬಾದ್ (94.10 ರೂ.), ಇಂಧೋರ್ (94.27ರೂ.) ಸೇರಿದಂತೆ ಹಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗಳಿಗೆ ಏರಿಕೆಯಾಗಿದ್ದು ಸಿಲಿಕಾನ್ ಸಿಟಿಯಲ್ಲೂ ಲೀಟರ್ ಪೆಟ್ರೋಲ್ ನೈಂಟಿಗೇರಲು ಸಜ್ಜಾಗಿದೆ. ಇಂದು ನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 26 ಪೈಸೆಗೆ ಏರಿಕೆಯಾಗುವ ಮೂಲಕ 89.21 ರೂ.ಗಳಿಗೆ ಏರಿದ್ದು ಇನ್ನೆರಡು ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಪೆಟ್ರೋಲ್ ದರ 90 ರೂ.ಗಳಿಗೆ ಮುಟ್ಟುವ ಸೂಚನೆಗಳಿವೆ.

ಚೆನ್ನೈನಲ್ಲಿಂದು ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಏರಿಕೆಯಾಗುವ ಮೂಲಕ 88.82 ರೂ.ಗಳಿಗೆ ಮುಟ್ಟಿದ್ದರೆ, ದೇಶದ ರಾಜಧಾನಿ ನವದೆಹಲಿಯಲ್ಲಿ 25 ಪೈಸೆ ಏರಿಕೆ ಕಾಣುವ ಮೂಲಕ 86.30 ರೂ.ಗಳಿಗೆ ಮುಟ್ಟಿದೆ, ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 87.69 ರೂ.ಗಳಿಗೆ ಮುಟ್ಟಿದೆ.

ಕಳೆದ ಕೆಲವು ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೂ ಕೂಡ ಇವುಗಳ ದರವನ್ನು ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗದಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

Facebook Comments