ನಾಯಿ ಸಾಕಿರುವ ಬೆಂಗಳೂರಿಗರೇ ತಪ್ಪದೆ ಇದನ್ನು ಗಮನಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.11- ಸಾಕುನಾಯಿಗಳಿಗೆ ವಾಕಿಂಗ್ ಸ್ವಾತಂತ್ರ್ಯ ಕೊಡಲು ಬಿಬಿಎಂಪಿ ಹೊಸ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.  ನಾಯಿ ಸಾಕಿದ್ದರೆ ಅದನ್ನು ವಾಕಿಂಗ್ ಕರೆದುಕೊಂಡು ಹೋಗಬೇಕಾದರೆ ಬೇರೆಯವರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಬಿಬಿಎಂಪಿ ಏಳು ನಿಯಮಗಳನ್ನು ರೂಪಿಸಿದೆ. ಸಾಕುನಾಯಿಗಳನ್ನು ಬೇಕಾಬಿಟ್ಟಿ ವಾಕಿಂಗ್‍ಗೆ ಕೊಂಡೊಯ್ಯುವಂತಿಲ್ಲ. ಬೇಕಾದ ಟೈಮ್‍ನಲ್ಲಿ ವಾಕ್ ಮಾಡಿಸುವಂತಿಲ್ಲ. ನಿಗದಿತ ಸಮಯದಲ್ಲೇ ವಾಕಿಂಗ್ ಮಾಡಿಸಬೇಕು. ಇದಕ್ಕಾಗಿ ಅನಿಮಲ್ ಬೋರ್ಡ್‍ನಿಂದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.

ಕೆರೆಗಳ ಆವರಣದಲ್ಲಿ ವಾಕ್ ಮಾಡಿಸುವ ಸಾಕು ನಾಯಿಗಳಿಗೆ ಕೊರಳಿಗೆ ಕಡ್ಡಾಯವಾಗಿ ಸರಪಳಿ ಹಾಕಿರಬೇಕು. ಬಾಯಿಗೆ ಕುಕ್ಕೆ ಕಡ್ಡಾಯವಾಗಿರಬೇಕು. ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಕಡ್ಡಾಯ. ಅಧಿಕಾರಿಗಳು ಕೇಳಿದಾಗ ದಾಖಲಾತಿ ತೋರಿಸಬೇಕು. ಸಾಕು ನಾಯಿಗಳು ಮಲಮೂತ್ರ ವಿಸರ್ಜನೆ ಮಾಡದಂತೆ ಮಾಲೀಕರು ಎಚ್ಚರ ವಹಿಸಬೇಕು. ಮಲಮೂತ್ರ ವಿಸರ್ಜಿಸಿದರೆ ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಸ್ವಚ್ಛ ಮಾಡದೆ ನಿರ್ಲಕ್ಷ್ಯ ವಹಿಸಿದರೆ 500ರೂ. ದಂಡ ಕಟ್ಟಬೇಕು. ಸಾಕುನಾಯಿಗಳಿಗೆ ಕೆರೆಗಳ ಅಂಗಳದಲ್ಲಿ ಆಹಾರ ನೀಡುವುದಕ್ಕೆ ನಿಷೇಧ ಮಾಡಲಾಗಿದೆ.

ರಾಟ್‍ವಿಲ್ಲರ್, ಜರ್ಮನ್ ಶಫರ್ಡ್, ಪಿಟ್ಟುಲ್, ಡಾಬರ್‍ಮ್ಯಾನ್, ಗ್ರೇಟ್‍ಡನ್ ನಾಯಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಲೀಕರು ಎಚ್ಚರ ವಹಿಸುವುದು ಸೇರಿದಂತೆ ಹಲವಾರು ನಿಯಮಾವಳಿಗಳನ್ನು ಬಿಬಿಎಂಪಿ ರೂಪಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೆಲವರಿಗೆ ತಾವು ವಾಕ್ ಮಾಡುವಾಗ ಜತೆಗೆ ಸಾಕುನಾಯಿಗಳನ್ನು ಕೊಂಡೊಯ್ಯುವ ಶೋಕಿ ಇದೆ. ಇಂದಿಗೂ ಕೂಡ ಅದು ಟ್ರೆಂಡಿಂಗ್ ಆಗಿದೆ. ದಿನವಿಡೀ ಮನೆಯಲ್ಲೇ ಇದ್ದು ಬೋರ್ ಆಗುವ ನಾಯಿಗಳಿಗೂ ಕೂಡ ಫ್ರೆಷ್‍ನೆಸ್ ಸಿಗಲಿ ಎಂಬುದು ಕೆಲವರ ಅಭಿಪ್ರಾಯವಾದರೆ ತಮ್ಮಲ್ಲಿರುವ ಬೆಲೆಬಾಳುವ ನಾಯಿಗಳನ್ನು ಶೋ ಅಪ್ ಮಾಡುವುದು ಇನ್ನೂ ಕೆಲವರ ಪ್ರತಿಷ್ಠೆಯ ದ್ಯೋತಕವಾಗಿದೆ.

ಹಾಗೆಯೇ ವಾಕಿಂಗ್‍ಗೆ ನಾಯಿಗಳನ್ನು ಕರೆದೊಯ್ಯುವ ಮಾಲೀಕರು ಅವುಗಳಿಂದಾಗುವ ಒಂದಷ್ಟು ಕಿರಿಕಿರಿಯನ್ನು ಮಾತ್ರ ಸರಿಪಡಿಸುವ ಮನಸ್ಸು ಮಾಡುತ್ತಿಲ್ಲ. ಅನೇಕ ವರ್ಷಗಳಿಂದಲೂ ಸಾರ್ವಜನಿಕರು ಹಾಗೂ ಸಾಕುನಾಯಿಗಳ ಮಾಲೀಕರ ನಡುವೆ ಗೊಂದಲ ಉಂಟಾಗಿತ್ತು.

ಮಲಮೂತ್ರ ವಿಸರ್ಜನೆ, ಬೊಗಳುವಿಕೆ, ಬೇರೆಯವರ ಮೇಲೆ ದಾಳಿ, ಕಚ್ಚುವಿಕೆಯಂತಹ ಘಟನೆಗಳು ನಡೆದಿದ್ದವು. ಆರೋಪ-ಪ್ರತ್ಯಾರೋಪ, ಜಗಳ ನಡೆದ ಘಟನೆಗಳು, ಪರಿಹಾರ ಸಿಗದೆ ಸಮಸ್ಯೆಯಾಗಿಯೇ ಉಳಿದಿದ್ದವು. ಸಾಕುನಾಯಿಗಳನ್ನು ಪಾರ್ಕ್‍ಗೆ, ಕೆರೆಗಳ ಅಂಗಳಕ್ಕೆ ತಂದರೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಆಕ್ರೋಶ, ಆಕ್ಷೇಪಕ್ಕೆ ನಾಯಿ ಮಾಲೀಕರು ತಮ್ಮದೇ ವಾದ ಮಂಡಿಸುತ್ತಿದ್ದರು. ಇದು ಸಹಜವಾಗಿಯೇ ಶ್ವಾನಪ್ರಿಯರು ಹಾಗೂ ಪ್ರಾಣಿದಯಾ ಸಂಘಗಳಲ್ಲಿ ಬೇಸರ ಮೂಡಿಸಿದೆ.

ಸಾಕುನಾಯಿಗಳ ಮಾಲೀಕರ ಹೊಣೆಗೇಡಿತನ ಹಾಗೂ ಸಾರ್ವಜನಿಕರ ಅಸಹಕಾರದಿಂದ ಬೇಸತ್ತ ಸಾಕಷ್ಟು ಪ್ರಾಣಿಪ್ರಿಯರು ಸರ್ಕಾರದ ಮಟ್ಟದಿಂದ ಹಿಡಿದು ಕೇಂದ್ರ ಸರ್ಕಾರ ಹಾಗೂ ಅನಿಮಲ್ ವೆಲ್‍ಫೇರ್ ಬೋರ್ಡ್‍ಗೂ ತಮ್ಮ ಅಹವಾಲು ಸಲ್ಲಿಸಿದ್ದರು. ಇದಕ್ಕೊಂದು ಪ್ರತ್ಯೇಕ ನಿಯಮ ರೂಪಿಸಿ ಸಾಕುನಾಯಿಗಳಿಗೂ ಬೇಕಿರುವ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದರು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

Facebook Comments