ಬೆಂಗಳೂರಿನಲ್ಲಿರುವ ಅನಧಿಕೃತ ಪಿಜಿಗಳಿಗೆ ಮೇಯರ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.13- ನಗರದಲ್ಲಿ ತಲೆ ಎತ್ತಿರುವ ಅನಧಿಕೃತ ಪಿಜಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಮೇಯರ್ ಗೌತಮ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಆಯುಕ್ತ ಅನಿಲ್‍ಕುಮಾರ್ ಅವರೊಂದಿಗೆ ಈ ಸಂಬಂಧ ಚರ್ಚೆ ನಡೆಸಿದ್ದು, ಏಜೆನ್ಸಿ ಮುಖಾಂತರ ನಗರದಲ್ಲಿ ಸುಮಾರು ಏಳರಿಂದ ಎಂಟು ಸಾವಿರ ಪಿಜಿಗಳು ನೋಂದಣಿ ಮಾಡಿಸಿ ಕಾರ್ಯ ನಡೆಸುತ್ತಿವೆ.

ಆದರೆ, 15 ಸಾವಿರಕ್ಕೂ ಹೆಚ್ಚು ಪಿಜಿಗಳು ಇರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.ಮನೆಯ ಹೆಸರಿನಲ್ಲಿ ಕಟ್ಟಡ ಪಡೆದು ಅಲ್ಲಿ ಕಮರ್ಷಿಯಲ್ ಚಟುವಟಿಕೆ ನಡೆಸಲಾಗುತ್ತಿದೆ. ಪಿಜಿ ಮಾಲೀಕರು ನೀರು, ವಿದ್ಯುತ್ ಸೇರಿದಂತೆ ಹಲವು ಸೇವೆಗಳನ್ನು ಪಡೆಯುತ್ತಾರೆ. ಆದರೆ, ಅನುಮತಿಯನ್ನೇ ಪಡೆದಿರುವುದಿಲ್ಲ, ನೋಂದಣಿಯನ್ನೂ ಮಾಡಿಸದಿರುವುದು ಗೊತ್ತಾಗಿದೆ. ಅಂತಹ ಪಿಜಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶೀಘ್ರವೇ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನಧಿಕೃತ ಪಿಜಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಅವರಿಂದ ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳುವುದೋ ಅಥವಾ ಕಮರ್ಷಿಯಲ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವುದೋ, ಟ್ರೇಡ್ ಲೈಸೆನ್ಸ್ ಹಾಕುವುದೋ ಎಂಬುದೆಲ್ಲದರ ಬಗ್ಗೆ ಚರ್ಚಿಸಿ ಅನಧಿಕೃತ ಪಿಜಿಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಮೇಯರ್ ತಿಳಿಸಿದ್ದಾರೆ.

ನಾಯಿ ಕೊಡೆಗಳಂತೆ ತಲೆ ಎತ್ತಿರುವ ಪಿಜಿಗಳಿಗೆ ಕಂಟಕ ಕಾದಿದೆ. ಇನ್ನು ಮುಂದೆ ಪರವಾನಗಿ ಪಡೆಯದಿದ್ದರೆ ಖಂಡಿತಾ ಪೆನಾಲ್ಟಿ ಕಟ್ಟಬೇಕಾಗುತ್ತದೆ. ಪಿಜಿಗಳಿಗೆ ಹೊಸ ನಿಯಮ ಜಾರಿಗೆ ತರಲು ಪಾಲಿಕೆ ಚಿಂತನೆ ನಡೆಸಿದ್ದು, ಪಿಜಿಗೆ ಬರುವ ಪ್ರತಿಯೊಬ್ಬ ಸದಸ್ಯನ ವಿವರವನ್ನು ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕಾಗಿದೆ. ಈ ಎಲ್ಲ ಕ್ರಮಗಳನ್ನು ಕೈಗೊಳ್ಳದಿದ್ದರೆ ಪಿಜಿಯನ್ನೇ ಮುಚ್ಚಿಸಲಾಗುತ್ತದೆ. ಅಕ್ರಮ ಪಿಜಿಗಳು ನೋಂದಣಿಯಾದರೆ ಪಾಲಿಕೆ ಬೊಕ್ಕಸಕ್ಕೆ ಭಾರೀ ಆದಾಯ ಬರುವ ನಿರೀಕ್ಷೆಯಿದೆ.

Facebook Comments