ಅಧಿವೇಶನಕ್ಕೆ ಕೈ ಕೊಡಲು ಪೈಲೆಟ್ ಅಂಡ್ ಟೀಮ್ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.1- ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಾಯಕತ್ವದ ವಿರುದ್ದ ಬಹಿರಂಗವಾಗಿಯೇ ತೊಡೆತಟ್ಟಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಬಣ, ಇದೇ 14 ರಂದು ಆರಂಭವಾಗಲಿರುವ ಅಧಿವೇಶನಕ್ಕೂ ಕೈ ಕೊಡಲು ತೀರ್ಮಾನಿಸಿದೆ.

ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಪಾಲ್ಗೊಳ್ಳುವುದು ಬೇಡ. ಎಷ್ಟು ನೋಟೀಸ್ ಬೇಕಾದರೆ ನೀಡಲಿ. ಕಾನೂನು ಹೋರಾಟ ಮುಂದುವರೆಸೋಣ ಎಂದು ಸಚಿನ್ ಪೈಲೆಟ್ ಬಣದ ಶಾಸಕರು ಹೇಳಿದ್ದಾರೆ.

ನಾವು ಎಲ್ಲಿಯೂ ಸರ್ಕಾರ ಆಸ್ಥಿರಗೊಳಿಸುತ್ತೇವೆ ಎಂದು ಹೇಳಿಲ್ಲ. ನಮ್ಮ ಹೋರಾಟ ನಾಯಕತ್ವದ ವಿರುದ್ದ ಹೊರತು ಪಕ್ಷ ಅಥವಾ ಸರ್ಕಾರದ ವಿರುದ್ದವಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 14ರಿಂದ ಅಧಿವೇಶನ ಕರೆದಿದ್ದಾರೆ.

ನಮ್ನನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವಂತೆ ಸ್ವೀಕರ್‍ಗೆ ದೂರು ನೀಡಿದವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೆಸರು ಬಹರಿಂಗಪಡಿಸದ ಶಾಸಕರೊಬ್ಬರು ತಿಳಿಸಿದ್ದಾರೆ.

ನಾವು ಮತ್ತೆ ಮತ್ತೆ ಸ್ಪಷ್ಟಪಡಿಸುವುದು ಏನೆಂದರೆ, ಜನವಿರೋಧಿಯಾಗಿರುವ ಈ ಸರ್ಕಾರ ಕೇವಲ ಭ್ರಷ್ಟಚಾರದಲ್ಲಿ ಮುಳುಗಿದೆ. ನಾವು ನಾಯಕತ್ವದ ವಿರುದ್ದ ಹೋರಾಟ ನಡೆಸುತ್ತಿದ್ದೇವೆ. ಇದನ್ನು ಭಿನ್ನಮತ ಎಂದು ಹೇಗೆ ಕರೆಯುತ್ತೀರಿ ಎಂಧು ಪ್ರಶ್ನೆಸಿದ್ದಾರೆ.

ಬಿಜೆಪಿ ಸೇರುವುದಿಲ್ಲ ಎಂದು ಹಲವಾರು ಬಾರಿ ಸ್ಪಷ್ಟಪಡಿಸಿದ್ದೇವೆ. ನಾವು ವಿಧಾನಸೌಧದಲ್ಲಿ ಪ್ರತ್ಯೇಕ ಬಣ ಮಾಡಿಕೊಂಡು ಕೂರಲು ಸಿದ್ದರಿದ್ದೇವೆ. ಕೆಲವರು ನಮ್ಮ ವಿರುದ್ದ ಉದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆಸುತ್ತಿದ್ದಾರೆ.

ತಾತ್ಕಲಿಕವಾಗಿ ಈಗ ಅವರು ಯಶಸ್ವೀಯಾಗಿರಬಹುದು. ಮುಂದೆ ಏನಾಗಲಿದೆ ಎಂಬುದನ್ನು ನೀವೇ ಕಾದು ನೋಡಿ ಎಂದು ಸೂಚ್ಯವಾಗಿ ಮತ್ತೊಬ್ಬ ಶಾಸಕ ಹೇಳಿದ್ದಾರೆ. ರಾಜಸ್ತಾನದಲ್ಲಿ ಕಳೆದ ಒಂದು ತಿಂಗಳಿನಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಡಿಸಿಎಂ ಸಚಿನ್ ಪೈಲೆಟ್ ನಡುವೆ ಜಂಗಿಕುಸ್ತೀ ನಡೆಯುತ್ತಿದೆ.

ಸಿ.ಎಂ ಬದಲಾವಣೆಗೆ ಪೈಲೆಟ್ ಬಣ ಪಟ್ಟು ಹಿಡಿದಿದೆ. ಇದಕ್ಕೆ ತಿರುಗೇಟು ಕೊಟ್ಟಿರುವ ಗೆಹ್ಲೋಟ್, ಸಚಿನ್ ಪೈಲೆಟ್ ಮತ್ತು ಅವರ ಜೊತೆ ಗುರುತಿಸಿಕೊಂಡಿದ್ದ ಇಬ್ಬರನ್ನು ಸಂಪುಟದಿಂದ ಕಿತ್ತು ಹಾಕಿದ್ದಾರೆ
ಪೈಲೆಟ್‍ಗೆ ಕೊಡಲಾಗಿದ್ದ ಉಪಮುಖ್ಯಮಂತ್ರಿ, ಜೊತೆಗೆ ಲೋಕೋಪಯೋಗಿ ಖಾತೆಯನ್ನು ಕಿತ್ತುಹಾಕುವುದರ ಜೊತೆಗೆ ಇಬ್ಬರು ಸಚಿವರಿಗೂ ಗೇಟ್ ಪಾಸ್ ನೀಡಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಸಚಿನ್ ಬಣದಲ್ಲಿರುವ 19 ಮಂದಿ ಶಾಸಕರನ್ನು ವಿಧಾನಸಭೆಯ ಸ್ಪೀಕರ್ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆಯಲ್ಲಿ ಅನರ್ಹಗೊಳಿಸಲು ಮುಂದಾಗಿದ್ದಾರೆ.

ಈಗಾಗಲೇ ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನಲ್ಲಿ ಎರಡು ಕಡೆ ವಾದ ವಿವಾದ ನಡೆದಿದ್ದು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಇದರ ನಡುವೆ ಇದೇ 14 ರಿಂದ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ ರಾಜ್ ಮಿಶ್ರ ಅವರು ಅನುಮತಿ ನೀಡಿದ್ದಾರೆ.

ಅಧಿವೇಶನದ ಸಂದರ್ಭದಲ್ಲೇ ತಮ್ಮ ಸರ್ಕಾರಕ್ಕೀರುವ ಬಹಮತವನ್ನು ಸಾಬೀತುಪಡಿಸಲು ಮುಂದಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಗೆಹ್ಲೋಟ್ ಬಣದಲ್ಲಿರುವ ಶಾಸಕರನ್ನು ನಿನ್ನೆಯಷ್ಟೇ ಜೈಸ್ಮೇರ್ ಗೆ ಕಳುಹಿಸಿಕೊಡಲಾಗಿದೆ.

ರಾಜಸ್ತಾನದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಾಮಾನಗಳು ದೇಶದ ಗಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ನಡುವಿನ ಕುಸ್ತಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾಲವೇ ತೀರ್ಮಾನಿಸಲಿದೆ.

Facebook Comments

Sri Raghav

Admin