ಪಿಟ್ ಎನ್‍ಡಿಪಿಎಸ್ ಕಾಯ್ದೆಯಡಿ ವಿದೇಶಿ ಡ್ರಗ್ ಡೀಲರ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ಮಾದಕ ದ್ರವ್ಯ ಮಾರಾಟ ಜಾಲವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಅನುಷ್ಠಾನಗೊಳಿಸಿರುವ ಪಿಟ್ ಎನ್‍ಡಿಪಿಎಸ್ ಕಾಯ್ದೆಗೆ ರಾಜ್ಯ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿ ಒಪ್ಪಿಗೆ ಸೂಚಿಸಿದೆ. ನೈಜೀರಿಯಾದಿಂದ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿ ನಿರಂತರವಾಗಿ ಡ್ರಗ್ಸ್ ಜಾಲದಲ್ಲಿ ತೊಡಗಿದ್ದ ಮಕುಕೋ ಚುಕ್ವಾಕಾ ಮುಲಾಕ್ವೋ ಅವರ ವಿರುದ್ಧ ಪಿಟ್ ಎನ್‍ಡಿಪಿಎಸ್ ಕಾಯ್ದೆಯಡಿ ದಾಖಲಿಸಿದ್ದ ಮೊಕದ್ದಮೆಗೆ ನ್ಯಾಯಪೀಠ ಒಪ್ಪಿಗೆ ಸೂಚಿಸಿದ್ದು , ಆರೋಪಿಗೆ ಒಂದು ವರ್ಷಗಳ ಖಾಯಂ ಕಾರಾಗೃಹ ವಾಸವನ್ನು ಎತ್ತಿ ಹಿಡಿದಿದೆ.

2012ರಲ್ಲಿ ಭಾರತಕ್ಕೆ ಬಂದು ನಗರದ ಕೊತ್ತನೂರು , ಕೋಣನಕುಂಟೆ , ಬಾಣಸವಾಡಿ , ಬೆಂಗಳೂರು ಗ್ರಾಮಾಂತರ, ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮುಲಾಕ್ವೋ ವಿರುದ್ಧ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋಗಳಲ್ಲಿ 5 ಪ್ರಕರಣ ದಾಖಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಪದೇ ಪದೇ ಮನೆ ಬದಲಾವಣೆ ಮಾಡಿಕೊಂಡು ಡ್ರಗ್ಸ್ ದಂಧೆಯನ್ನು ಮುಂದುವರೆಸಿದ್ದ. ಈತನ ಹೆಂಡತಿ ಗಿಫ್ಟ್ ಚಿನೇನ್ಯೆ ಬೆಂಡಿಕ್ಟ್ ಕೂಡ ಮುಲಾಕ್ವೋಗೆ ಸಹಕರಿಸುತ್ತಿದ್ದು , ಆಕೆಯು ಎರಡು ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ.

ನೈಜೀರಿಯಾ ಮೂಲದ ಈ ದಂಪತಿ ಬಾಡಿಗೆ ಮನೆ ಮಾಡುವಾಗ ಮಾಲೀಕರಿಗೆ ನಕಲಿ ಪಾಸ್‍ಪೋರ್ಟ್ ತೋರಿಸಿ ಬಟ್ಟೆ ವ್ಯಾಪಾರ ಮಾಡುವುದಾಗಿ ಸುಳ್ಳು ಹೇಳಿ ಮನೆ ಬಾಡಿಗೆಗೆ ಪಡೆಯುತ್ತಿದ್ದರು. ಮುಲಾಕ್ವೋ ವಿರುದ್ಧ 5 ಪ್ರಕರಣ ದಾಖಲಾಗಿದ್ದರೂ ತನ್ನ ಅಪರಾಧ ಕೃತ್ಯಗಳನ್ನು ನಿಲ್ಲಿಸದ ಹಿನ್ನೆಲೆಯಲ್ಲಿ 1988ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಅನ್ವಯ ಆತನನ್ನು ಬಂಧಿಸುವಂತೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಜಂಟಿ ಆಯುಕ್ತ ಸಂದೀಪ್ ಪಾಟೀಲ್‍ಹಾಗೂ ಸಿಸಿಬಿ ಡಿಸಿಪಿ ಕುಲ್‍ದೀಪ್ ಕುಮಾರ್ ಜೈನ್ ಅವರ ಶಿಫಾರಸಿನ ಮೇರೆಗೆ ಪೊಲೀಸ್ ಕಮಿಷನರ್ ಭಾಸ್ಕರ್‍ರಾವ್ ಅವರು ಕಳೆದ ಮಾ.16ರಂದು ಮುಲಾಕ್ವೋ ಬಂಧನಕ್ಕೆ ಆದೇಶ ಹೊರಡಿಸಿದ್ದರು.

ಆಯುಕ್ತರ ಆದೇಶದ ಮೇರೆಗೆ ಮುಲಾಕ್ವೋನನ್ನು ಬಂಧಿಸಿ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಅನುಷ್ಠಾನಗೊಳಿಸಿದ ಪಿಟ್ ಎನ್‍ಡಿಪಿಎಸ್ ಕಾಯ್ದೆಯಡಿ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ವಿಸ್ತೃತವಾಗಿ ಪರಿಶೀಲಿಸಿದ ರಾಜ್ಯ ಉಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರನ್ನೊಳಗೊಂಡ ಸಲಹಾ ಮಂಡಳಿಯು ಪೊಲೀಸ್ ಆಯುಕ್ತರ ಕ್ರಮವನ್ನು ಎತ್ತಿ ಹಿಡಿದಿದೆ.

Facebook Comments