ಚಿಕ್ಕಪೇಟೆಯ ಕಾಶೀವಿಶ್ವನಾಥ ದೇವಾಲಯದ ಬಳಿ ಪಿತೃ ತರ್ಪಣಕ್ಕೆ ನೂಕುನುಗ್ಗಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ.17- ಮಹಾಲಯ ಅಮಾವಾಸ್ಯೆಯಾದ ಇಂದು ಹಿರಿಯರಿಗೆ ತರ್ಪಣ ಬಿಡುವುದು ವಾಡಿಕೆ. ನಮ್ಮನ್ನು ಅಗಲಿರುವ ಪೂರ್ವಿಕರನ್ನು ಸ್ಮರಿಸುವ ದಿನವಾದ ಇಂದು ಬೆಂಗಳೂರಿನ ಚಿಕ್ಕಪೇಟೆಯ ಕಾಶೀವಿಶ್ವನಾಥ ದೇವಾಲಯದ ಬಳಿ ಜನಸಾಗರವೇ ನೆರೆದಿತ್ತು.

ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನೇ ಮರೆತು ಹೋದಂತಿತ್ತು. ಬೆಳ್ಳಂ ಬೆಳಗ್ಗೆ ಹಿರಿಯರಿಗೆ ಪೂಜೆ ಸಲ್ಲಿಸುವ ಕಾರ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ದೇವಾಲಯದ ಬಳಿ ನೆರೆದಿದ್ದರು. ಪೂಜಾ ಸಾಮಗ್ರಿಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರು.

ನಗರಾ ದ್ಯಂತ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೂ ಕೊರೊ ನಾದ ಯಾವುದೇ ಭಯ ವಿಲ್ಲದಂತೆ ಜನರು ಜಮಾಯಿಸಿದ್ದರು. ನಮ್ಮನ್ನು ಅಗಲಿರುವ ಹಿರಿಯರನ್ನು ಸ್ಮರಿಸುವ ಪರ್ವವೇ ಮಹಾಲಯ ಅಮಾವಾಸ್ಯೆ. ಭಾದ್ರಪದ ಮಾಸದ ಕೃಷ್ಣಪಕ್ಷದ 15ದಿನಗಳನ್ನು ಮಹಾಲಯ ಪಕ್ಷ ಎಂದು ಕರೆಯುತ್ತಾರೆ.

ಈ 15ದಿನದೊಳಗಾಗಿ ಅಗಲಿದ ಹಿರಿಯರನ್ನು ತೃಪ್ತಿಗೊಳಿಸುವ ಸಲುವಾಗಿ ಎಳ್ಳು, ನೀರು, ಜೇನು ತುಪ್ಪದ ತರ್ಪಣ ಬಿಡಲಾಗುತ್ತದೆ. ಸಾಮಾನ್ಯವಾಗಿ ಹರಿಯುವ ನದಿ ದಡದಲ್ಲಿ ಹಳ್ಳಗಳ ಬದಿಯಲ್ಲಿ ಈ ಕಾರ್ಯವನ್ನು ನೆರವೇರಿಸುವುದು ವಾಡಿಕೆ. ಶ್ರೀರಂಗಪಟ್ಟಣದ ಕಾವೇರಿ ನದಿ ದಡ, ಗೋಕರ್ಣ ಮುಂತಾದ ಕಡೆಗೆ ಜನರು ತೆರಳಿ ತರ್ಪಣ ಅರ್ಪಿಸುತ್ತಾರೆ.

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಾಶೀವಿಶ್ವನಾಥನ ದೇವಾಲಯದ ಬಳಿ ಇದಕ್ಕಾಗಿ ಇಂದು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ದೇವಾಲಯದ ಆವರಣದಲ್ಲಿ ಈ ಕಾರ್ಯವನ್ನು ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ಪ್ರಮಾಣದ ಜನರು ಸೇರಿದ್ದು, ಅಪರೂಪ.

ಕೊರೊನದಂತಹ ಸಾಂಕ್ರಾಮಿಕ ಪಿಡುಗು ವ್ಯಾಪಿಸಿರುವ ನಡುವೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಕಂಡುಬರಲಿಲ್ಲ. ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಮೊದಲೇ ಇರಲಿಲ್ಲ. ಜನರಲ್ಲಿ ಕೊರೋನ ಆತಂಕವೂ ಇದ್ದಂತಿರಲಿಲ್ಲ.

Facebook Comments