3 ದಿನ ಕಳೆದರು ರಾಜ್ಯದಲ್ಲಿ ಆರಂಭವಾಗಿಲ್ಲ ಪ್ಲಾಸ್ಮಾ ಥೆರಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.28- ಕೊರೊನಾ ರೋಗವನ್ನು ಪ್ಲಾಸ್ಮಾ ಥೆರಪಿ ಮೂಲಕ ಗುಣಪಡಿಸುವ ಕ್ಲಿನಿಕಲ್ ಟ್ರಯಲ್ ರಾಜ್ಯದಲ್ಲಿ ಮೂರು ದಿನ ಕಳೆದರು ಪ್ರಾರಂಭವಾಗಿಲ್ಲ.ಕೇಂದ್ರ ಸರ್ಕಾರ ದೇಶದಲ್ಲಿ ದೆಹಲಿ ನಂತರ ಕರ್ನಾಟಕಕ್ಕೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿತ್ತು.

ಮೂರು ದಿನಗಳ ಹಿಂದೆ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಬ್ಬರು ಕ್ಲಿನಿಕಲ್ ಟ್ರಯಲ್ ಅನ್ನು ಉದ್ಘಾಟಿಸಿದರು. ಆರಂಭದಲ್ಲಿ ದಾನಿಗಳ ಕೊರತೆ ಎದುರಾಗಿತ್ತು. ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳಿಂದ ರಕ್ತ ಪಡೆದು ಅದರಲ್ಲಿ ಪ್ಲಾಸ್ಮಾವನ್ನು ಬೇಪರ್ಡಿಸಿ ಈಗ ಸೋಂಕಿನಿಂದ ಬಳಲುತ್ತಿರುವವರಿಗೆ ಔಷಧಿ ರೂಪದಲ್ಲಿ ಪ್ಲಾಸ್ಮಾವನ್ನು ನೀಡುವ ಈ ಪ್ರಯೋಗಾರ್ಥ ಚಿಕಿತ್ಸೆಗೆ ಮೊದಲ ಮೊದಲು ರಕ್ತದಾನಿಗಳ ಕೊರತೆ ಎದುರಾಗಿತ್ತು.

ಕೊರೊನಾದಿಂದ ಗುಣಮುಖರಾದ ರೋಗಿಗಳು ರಕ್ತದಾನ ಮಾಡಲು ಮುಂದೆ ಬಂದಿರಲಿಲ್ಲ. ವೈದ್ಯಾಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮನವೋಲಿಕೆಯಿಂದ ನಿನ್ನೆ ಇಬ್ಬರು ದಾನಿಗಳು ಮುಂದೆ ಬಂದು ರಕ್ತದಾನ ಮಾಡಿದ್ದಾರೆ. ಇನ್ನಿಬ್ಬರು ಇಂದು ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಕುರಿತು ಅಧ್ಯಯನ ನಡೆಸುತ್ತಿದ್ದ ಕೇಲವು ವೈದ್ಯರು ಕೇಂದ್ರ ಸರ್ಕಾರ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡುತ್ತಿದ್ದಂತೆ ರೋಗಿಗಳ ಮೇಲೆ ಪ್ರಯೋಗ ಮಾಡಲು ಆತುರ ತೋರಿದರು. ವಿಶ್ವವನ್ನೇ ಕಂಗೆಡಿಸಿರುವ ಕೊರೊನಾಗೆ ಔಷಧಿ ಕಂಡು ಹಿಡಿದೆ ಬಿಟ್ಟವು ಎಂಬ ಕೀರ್ತಿ ಸಂಪಾದಿಸಲು ಪ್ರಯತ್ನಿಸಿದರು. ಆದರೆ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ ಜೊತೆಯಲ್ಲೇ ಕೆಲವು ಕಟ್ಟಲೆಗಳನ್ನು ವಿಧಿಸಿದೆ.

ಕೊರೊನಾಗೆ ಖಚಿತ ಔಷಧಿ ಇಲ್ಲವಾಗಿದೆ, ಸದ್ಯಕ್ಕೆ ಏನೇ ನಡೆದರು ಅದೇಲ್ಲಾ ಪ್ರಯೋಗಾರ್ಥವೇ ಆಗಿದೆ. ಒಂದು ವೇಳೆ ಪ್ರಯೋಗದ ಸಂದರ್ಭದಲ್ಲಿ ಹೆಚ್ಚು ಕಡಿಮೆಯಾದರೆ ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ಹಾಗಾಗಿ ಮರಣಶಯ್ಯೆಯಲ್ಲಿರುವ, ಚಿಕಿತ್ಸೆಯ ಅಂತಿಮ ಘಟ್ಟದಲ್ಲಿ ಇರುವ ರೋಗಿಗಳ ಮೇಲೆ ಪ್ರಯೋಗ ಮಾಡುವಂತೆ ಸೂಚಿಸಿದೆ.

ಎಲ್ಲಾ ಚಿಕಿತ್ಸೆಗಳು ವಿಫಲವಾಗಿ ಐಸಿಯ ಮತ್ತು ವೆಂಟಿಲೆಟರ್ ನಲ್ಲಿ ಇರುವ ರೋಗಿಗಳ ಮೇಲೆ ಪ್ಲಾಸ್ಮಾ ಪ್ರಯೋಗ ನಡೆಸಬಹುದು. ಈ ಪ್ರಯೋಗಕ್ಕೂ ಮುನ್ನಾ ರೋಗಿಯ ಮತ್ತು ರೋಗಿಯ ಸಂಬಂಧಿಗಳ ಅನುಮತಿ ಕಡ್ಡಾಯವಾಗಿದೆ.

ಮೊನ್ನೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಒಬ್ಬ ಮಹಿಳೆ ಗಂಭೀರ ಪರಿಸ್ಥಿತಿಯಲ್ಲಿದ್ದರು. ಆಕೆಯ ಮೇಲೆ ಪ್ಲಾಸ್ಮಾ ಥೆರಪಿ ನಡೆಸಬಹುದಾಗಿತ್ತಾದರೂ ಆ ವೇಳೆಗೆ ರಕ್ತದಾನಿಗಳು ಸಿಕ್ಕಿರಲಿಲ್ಲ. ದಾನಿಗಳ ಮತ್ತು ರೋಗಿಯ ರಕ್ತದ ಗುಂಪು ಕೂಡ ಹೊಂದಾಣಿಕೆಯಾಗಬೇಕಿದೆ. ಪ್ಲಾಸ್ಮಾವನ್ನು ಸಂಗ್ರಹಿಸಿ ಬಹಳ ದಿನ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ದಾನಿಯ ರಕ್ತದಿಂದ ಸಂಗ್ರಹಿಸಲಾದ ಪ್ಲಾಸ್ಮಾವನ್ನೂ ಕೆಲವೇ ದಿನಗಳಲ್ಲಿ ರೋಗಿಗೆ ನೀಡಬೇಕು.

ಇಲ್ಲಿ ಯಾವ ರೋಗಿ ಗಂಭೀರ ಪರಿಸ್ಥಿತಿಗೆ ತಲುಪುತ್ತಾರೆ ಎಂದು ಗೋತ್ತಿಲ್ಲ. ಗಂಭೀರ ಸ್ಥಿತಿಗೆ ತಲುಪುವ ರೋಗಿಯ ರಕ್ತಕ್ಕೆ ಹೊಂದಾಣಿಕೆಯಾಗುವ ದಾನಿಯನ್ನು ಕರೆ ತಂದು ಪ್ಲಾಸ್ಮ ಸಂಗ್ರಹಿಸುವುದು ಕಷ್ಟ ಸಾಧ್ಯವಾದ ಕ್ರಮವಾಗಿದೆ. ಇವೆಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ರಾಜ್ಯದ ವೈದ್ಯರು ಕ್ಲಿನಿಕಲ್ ಟ್ರಯಲ್ ಗೆ ಮುಂದಾಗಿದ್ದಾರೆ.

ಈಗಷ್ಟೆ ದಾನಿಗಳು ಸಿಕ್ಕಿದ್ದಾರೆ, ಆದರೆ ರೋಗಿಗಳ ಕಡೆಯಿಂದ ಅನುಮತಿ ಪಡೆಯುವುದು ಕಷ್ಟವಾಗುತ್ತಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವವರ ಬಳಿ ಸಂಬಂಧಿಕರು ಯಾರು ಇರುವುದಿಲ್ಲ. ಎಲ್ಲರೂ ಅವರ ಮನೆಯಲ್ಲಿ ಇರುತ್ತಾರೆ, ಅವರನ್ನು ಸಂಪರ್ಕಿಸಿ ಕ್ಲಿನಿಕಲ್ ಟ್ರಯಲ್ ನ ಕುರಿತು ವಿವರಣೆ ನೀಡಿ ಅನುಮತಿ ಪಡೆಯುವುದು ಸುಲಭದ ಮಾತಲ್ಲ.

ರೋಗಿಯ ಸಂಬಂಧಿಕರು ಕೂಡ ಕ್ವಾರಂಟೈನ್ ನಲ್ಲೇ ಇದ್ದಾರೆ. ಅವರ ಬಳಿ ಹೋಗಿ ವಿವರಣೆ ನೀಡಲು ಹಿರಿಯ ಅಧಿಕಾರಿಗಳೇ ಹೋಗಬೇಕು, ದೂರವಾಣಿಯಲ್ಲಿ ನಡೆಯುತ್ತಿರುವ ಸಂಭಾಷಣೆಗಳು ಹೆಚ್ಚು ಫಲಪ್ರದವಾಗುತ್ತಿಲ್ಲ.

ಇನ್ನೂ ರೋಗಿಯಿಂದಲೇ ಅನುಮತಿ ಪಡೆಯಲು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುತ್ತದೆ, ಅವರಿಗೆ ಎಲ್ಲವನ್ನು ವಿವರಿಸಿ ಮನವೋಲಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೇಲ್ಲಾ ಪ್ರಕ್ರಿಯೆಗಳನ್ನು ನಿಧಾನಕ್ಕೆ ನಿಭಾಯಿಸಲು ಕೊರೊನಾ ಸಮಯಾವಕಾಶವನ್ನು ಕೊಡುತ್ತಿಲ್ಲ.

ಹೇಳದೆ ಕೇಳದೆ ಪ್ರಯೋಗಾರ್ಥ ಚಿಕಿತ್ಸೆ ನೀಡುವುದು ವೈದ್ಯಕೀಯ ವೃತ್ತಿಗೆ ವಿರೋಧವಾಗಿದೆ, ಒಂದು ವೇಳೆ ಆ ರೀತಿ ಪೂರ್ವಾನುಮತಿ ಇಲ್ಲದೆ ಕ್ಲಿನಿಕಲ್ ಟ್ರಯಲ್ ಮಾಡಿದ್ದು ಖಚಿತವಾದರೆ ಅಂತರಾಷ್ಟ್ರೀಯ ಕಾನೂನು ಪ್ರಕಾರ ಘೋರ ಅಪರಾಧವಾಗಲಿದೆ.

ಹೀಗಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದರೂ ರಾಜ್ಯದಲ್ಲಿ ಕ್ಲಿನಿಕಲ್ ಟ್ರಯಲ್ ಮಾಡುವುದು ಅಷ್ಟು ಸುಲಭದ ವಿಷಯವಾಗಿಲ್ಲ. ಬೇರೆ ಸಂದರ್ಭವಾಗಿದ್ದರೆ ಇಷ್ಟು ತೊಂದರೆಗಳು ಎದುರಾಗುತ್ತಿರಲಿಲ್ಲ. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲವೂ ಕಷ್ಟದಾಯಕವಾಗಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ, ಈವರೆಗೂ ರಕ್ತದಾನಿಗಳ ಕೊರತೆ ಇತ್ತು. ನಿನ್ನೆ ಇಬ್ಬರು ರಕ್ತದಾನ ಮಾಡಿದ್ದಾರೆ. ಇಂದು ಇನ್ನಿಬ್ಬರು ರಕ್ತದಾನಕ್ಕೆ ಮುಂದಾಗಿದ್ದಾರೆ.

ಇನ್ನು ಮುಂದೆ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಮತ್ತು ದಾನಿಗಳ ರಕ್ತದ ಗುಂಪು ಪರಿಶೀಲನೆ ಮಾಡಿ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಯಾವುದೇ ಪೈಪೋಟಿ ಇಲ್ಲ. ತಾಂತ್ರಿಕ ಸಮಸ್ಯೆಗಳಿವೆ, ಅವುಗಳನ್ನು ನಿವಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಎಲ್ಲಿಯೂ ಪ್ಲಾಸ್ಮಾ ಕ್ಲಿನಿಕಲ್ ಟ್ರಯಲ್ ಹೆಚ್ಚಾಗಿ ನಡೆಯುತ್ತಿಲ್ಲ. ದೆಹಲಿಯಲ್ಲೂ ಅವಕಾಶ ಸಿಕ್ಕಿದೆ. ಈವರೆಗೆ ಒಬ್ಬರ ಮೇಲಷ್ಟೇ ಪ್ರಯೋಗ ನಡೆದಿದೆ. ಉಳಿದಂತೆ ಕರ್ನಾಟಕವೇ ಹೆಚ್ಚು ಸಿದ್ಧತೆಗಳನ್ನು ನಡೆಸಿದೆ ಎಂದು ಹೇಳಿದ್ದಾರೆ. ರೋಗಿಯ ಸಂಬಂಧಿಕರಿಂದ ಅನುಮತಿ ಪಡೆದು ನಾವು ಈ ಚಿಕಿತ್ಸೆಯನ್ನು ಪ್ರಯೋಗ ಮಾಡುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin