ಖುದ್ದು ಫೀಲ್ಡಿಗಿಳಿದ ಮೇಯರ್, ಆ.1ರಿಂದ ಬೆಂಗಳೂರಲ್ಲಿ ಪ್ಲ್ಯಾಸ್ಟಿಕ್ ಬ್ಯಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.23- ಪ್ಲ್ಯಾಸ್ಟಿಕ್ ಉತ್ಪನ್ನಗಳ ಬಳಕೆ ಮಾಡುವ ಅಂಗಡಿ, ಮಳಿಗೆಗಳ ಮೇಲಿನ ದಾಳಿಯನ್ನು ಬಿಬಿಎಂಪಿ ತೀವ್ರಗೊಳಿಸಿದೆ. ಆ.1ರಿಂದ ಕಟ್ಟುನಿಟ್ಟಾಗಿ ಪ್ಲ್ಯಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದಾಗಿ ಆದೇಶ ಹೊರಡಿಸಿದೆ.

ಕಳೆದ ವಾರ ಮೇಯರ್ ಗಂಗಾಂಬಿಕೆಯವರೇ ಖುದ್ದಾಗಿ ಕಳಪೆ ಗುಣಮಟ್ಟದ ಪ್ಯ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಹಲವಾರು ಮಳಿಗೆಗಳ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಇನ್ನು ಮುಂದೆ ಪ್ಲ್ಯಾಸ್ಟಿಕ್ ಕವರ್‍ಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಇನ್ನು ಮುಂದೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಿನನಿತ್ಯ ದಾಳಿ ನಡೆಸಿ ಪ್ಲ್ಯಾಸ್ಟಿಕ್ ಬಳಕೆ ಮಾಡಿದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಿ ದಂಡ ವಿಧಿಸುವಂತೆ ಮೇಯರ್ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲಿಕೆಯ 8 ವಲಯಗಳ ವ್ಯಾಪ್ತಿಯಲ್ಲಿ ನಿರಂತರ ದಾಳಿ ಪ್ರಾರಂಭಿಸಿದ್ದಾರೆ. ಕಳೆದ ವಾರ ಪ್ಲ್ಯಾಸ್ಟಿಕ್ ಉತ್ಪಾದಕರಿಂದ ಲಕ್ಷಾಂತರ ರೂ.ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡು 19 ಲಕ್ಷ ರೂ. ದಂಡ ವಿಧಿಸಿದ್ದರು. ಈ ವಾರ ಕೂಡ ದಾಳಿ ಮುಂದುವರೆಸಿದ್ದು, ನಿನ್ನೆ ಕಡಿಮೆ ಮೌಲ್ಯದ ಪ್ಲ್ಯಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳಿಗೆ 2 ಲಕ್ಷ ರೂ. ದಂಡ ವಿಧಿಸಿದ್ದರು.

ಇಂದೂ ಕೂಡ ಹಲವಾರು ಅಂಗಡಿ, ಮಳಿಗೆಗಳ ಮೇಲೆ ದಾಳಿ ಮಾಡಿ ಭಾರೀ ಮೌಲ್ಯದ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ಲಕ್ಷಾಂತರ ರೂ. ದಂಡ ವಿಧಿಸುವ ಸಾಧ್ಯತೆ ಇದೆ.

ಆ.1ರವರೆಗೂ ನಿರಂತರವಾಗಿ ದಾಳಿ ನಡೆಸುವ ಆರೋಗ್ಯ ಇಲಾಖೆ ನಂತರ ನಗರದಲ್ಲಿ ಕಟ್ಟುನಿಟ್ಟಾಗಿ ಪ್ಲ್ಯಾಸ್ಟಿಕ್ ನಿಷೇಧ ಜಾರಿಗೆ ತರುವಲ್ಲಿ ಕಾರ್ಯನಿರತವಾಗಿದೆ. ನಗರದ ನಿವಾಸಿಗಳು ಕೂಡ ಇನ್ನು ಮುಂದೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿಯೇ ಕೊಡಬೇಕು.

ಒಂದು ವೇಳೆ ಪ್ಲ್ಯಾಸ್ಟಿಕ್ ಅಥವಾ ಇತರೆ ವಸ್ತುಗಳನ್ನು ಮಿಶ್ರಣ ಮಾಡಿ ನೀಡುವುದು ಕಂಡು ಬಂದರೆ ಪೌರಕಾರ್ಮಿಕರು ಅಂತಹ ತ್ಯಾಜ್ಯವನ್ನು ಸ್ವೀಕರಿಸುವುದಿಲ್ಲ ಹಾಗೂ ಅಂತಹವರಿಗೆ ದಂಡ ಕೂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಆ.1ರ ನಂತರ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ. ಯಾರೇ ಆಗಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿದರೆ ಮತ್ತು ಪ್ಲ್ಯಾಸ್ಟಿಕ್ ಕೊಂಡೊಯ್ಯುವುದು ಕಂಡು ಬಂದರೆ ಭಾರೀ ದಂಡ ಕಾದಿರುತ್ತದೆ.

ಒಟ್ಟಾರೆ ನಗರವನ್ನು ಪ್ಲ್ಯಾಸ್ಟಿಕ್ ಮುಕ್ತ ಮಾಡಲು ಹಾಗೂ ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಕಸವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ದಿಟ್ಟ ಹೆಜ್ಜೆ ಇಟ್ಟಿದೆ.

Facebook Comments

Sri Raghav

Admin