ಬೆಂಗಳೂರಿಗರಿಗೊಂದು ಮಹತ್ವದ ಮಾಹಿತಿ, 5ಪಟ್ಟು ದಂಡ ಕಟ್ಟಬೇಕಾಗುತ್ತೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ಸಮರ್ಪಕ ಕಸ ವಿಲೇವಾರಿಗೆ ಹೊಸ ಟೆಂಡರ್ ಕರೆಯಲಾಗಿದ್ದು, ಸೆ.1ರಿಂದ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡದಿದ್ದರೆ ಹಾಗೂ ಆ.1ರಿಂದ ಪ್ಲಾಸ್ಟಿಕ್ ಚೀಲ ಬಳಸುವ ಮಳಿಗೆಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ಎಚ್ಚರಿಸಿದರು.

ದಕ್ಷಿಣ ವಲಯದ 44 ವಾರ್ಡ್‍ಗಳಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡುವುದು ಸೆ.1ರಿಂದ ಕಡ್ಡಾಯ. ಆಗಸ್ಟ್ 1ರಿಂದಲೇ ಎಲ್ಲಾ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಸೆಪ್ಟೆಂಬರ್‍ನಿಂದ ಪ್ಯಾಸ್ಟಿಕ್ ಬಳಕೆ ಮಾಡಿದರೆ ಐದು ಪಟ್ಟು ದಂಡ ವಿಧಿಸಲಾಗುವುದು. ಕಸ ವಿಂಗಡಸಿದಿದ್ದರೆ ಭಾರೀ ಬೆಲೆ ತೆರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಂಗಡಣೆ ಮಾಡಿದ ಹಸಿ ಕಸವನ್ನು ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಸ್ಕರಣಾ ಘಟಕಗಳಲ್ಲಿ ಗೊಬ್ಬರವನ್ನಾಗಿ ತಯಾರಿಸಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಹೇಳಿದರು. ಪ್ಲಾಸ್ಟಿಕ್ ಬಳಕೆ ಮಾಡುವ ಮಳಿಗೆಗಳ ಮೇಲೆ ಪಾಲಿಕೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ಮಾಡಿದರೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮೇಯರ್ ಎಚ್ಚರಿಸಿದರು. ವ್ಯಾಪಾರಿಗಳು ಪ್ಲಾಸ್ಟಿಕ್ ಬದಲಿಗೆ ಪೇಪರ್ ಅಥವಾ ಬಟ್ಟೆ ಬ್ಯಾಗನ್ನು ಬಳಸುವಂತೆ ಕಿವಿಮಾತು ಹೇಳಿದರು.

ನಗರದಲ್ಲಿ ನೀರಿನ ಅಭಾವ ಉಂಟಾಗುತ್ತಿರುವುದರಿಂದ ಜನರು ನೀರನ್ನು ಮಿತ ಬಳಕೆ ಮಾಡಬೇಕು. ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಅಳವಡಿಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಕೆರೆಗಳಲ್ಲಿ ವಿಸರ್ಜನೆ ಮಾಡಿದರೆ ಪರಿಸರ ಹಾನಿಯಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಮೇಯರ್ ಕರೆ ನೀಡಿದರು. ಬೈರಸಂದ್ರ ವಾರ್ಡ್‍ನ ಸದಸ್ಯ ನಾಗರಾಜ್ ಮಾತನಾಡಿ, ಜಯನಗರ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ.

ಒಂದು ತಿಂಗಳು ವಾರ್ಡ್‍ನಲ್ಲಿ ಬೃಹತ್ ರ್ಯಾಲಿ ನಡೆಸುತ್ತೇವೆ. ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇವೆ. ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡುಬಂದರೆ ಐದು ಪಟ್ಟು ದಂಡ ವಿಧಿಸುವ ಕ್ರಮವನ್ನು ಅಧಿಕೃತವಾಗಿ ಜಾರಿಗೆ ತರುತ್ತೇವೆ ಎಂದರು.

ಕಸ ವಿಂಗಡಣೆಗೆ ವಾರ್ಡ್‍ನಲ್ಲಿ 25ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದು, ಈ ತಂಡದ ಜತೆಗೆ ಬಾಂಧವ ಸಂಘಟನೆ ಕೂಡ ಜಾಗೃತಿ ಮೂಡಿಸಲಿದೆ. ಈ ತಂಡಗಳು ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಗಟ್ಟುವುದರ ಜತೆಗೆ ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ವಿತರಿಸಲಿದೆ ಎಂದು ಹೇಳಿದರು.

ಬೈರಸಂದ್ರ ವಾರ್ಡ್‍ನ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಿಂದ ಆರಂಭವಾದ ಜಾಥಾ ಜಯನಗರದ ವಿವಿಧ ಪ್ರದೇಶಗಳ ಮೂಲಕ ಹಾದು ಹೋಗಿ ಸುಮಾರು 6 ಕಿ.ಮೀ. ಕ್ರಮಿಸಿದ್ದು, ಜಾಥಾದಲ್ಲಿ ವಿವಿಧ ಶಾಲೆಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin