ವ್ಯಾಪಾರಸ್ತರೇ ಪ್ಲಾಸ್ಟಿಕ್ ಬಳಸಿದರೆ ಪರವಾನಗಿ ರದ್ದಾಗುತ್ತೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.15- ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಮೇಯರ್ ಗಂಗಾಂಬಿಕೆ ನೋಟೀಸ್ ಜಾರಿ ಮಾಡಿದರು.ಉಪಮಹಾಪೌರ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತಿತರರೊಂದಿಗೆ ಮೇಯರ್ ಅವರು ನಗರದ ಕೆಲವು ಮಾರುಕಟ್ಟೆಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದರು.

ಯಶವಂತಪುರ ಆರ್‍ಎಂಸಿ ಯಾರ್ಡ್‍ಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಮತ್ತೆ ಪ್ಲಾಸ್ಟಿಕ್‍ನಿಂದ ತಯಾರಾಗುವ ಉತ್ನನ್ನಗಳನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು. ಮತ್ತೆ ಏನಾದರು ಪ್ಲಾಸ್ಟಿಕ್ ಮಾರಾಟ ಮಾಡಿದರೆ ದಂಡ ವಿಧಿಸುವುದರ ಜೊತೆಗೆ ಮುಲಾಜಿಲ್ಲದೆ ಪರಾವನಗಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ವಿದೆ. ಆದರೂ ಬಳಕೆ ಮಾಡುವುದು ಮಾತ್ರ ನಿಂತಿಲ್ಲ. ಆದ್ದರಿಂದ ಇಂದು ಪ್ರಮುಖ ಮಾರುಕಟ್ಟೆಗಳಾದ ಯಶವಂತಪುರ ಆರ್‍ಎಂ ಸಿ ಯಾರ್ಡ್, ಕೆ.ಆರ್.ಮಾರುಕಟ್ಟೆ, ರಸಲ್ ಮಾರುಕಟ್ಟೆ, ಜಾನ್ಸನ್ ಮಾರುಕಟ್ಟೆ, ಜಯನಗರ ಕಾಂಪ್ಲೆಕ್ಸ್ ಸೇರಿದಂತೆ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದರು.

ದಾಳಿ ನಡೆಸಿರುವ ಕಡೆಯಲ್ಲಾ ನಿಷೇಧವಾಗಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲಾ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಕೈ ಚೀಲದ ಬದಲು ಬಟ್ಟೆ ಬ್ಯಾಗ್ ಮತ್ತು ಪೇಪರ್ ಬ್ಯಾಗ್ ಬಳಸುವಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಇನ್ನು ಮುಂದೆ ಪಾಲಿಕೆ ಆರೋಗ್ಯಾಧಿಕಾರಿಗಳು ಒಂದು ವಾರಗಳ ಕಾಲ ಎಲ್ಲಾ ಮಾರುಕಟ್ಟೆ, ಕಾಂಪ್ಲೆಗಳು, ಅಂಗಡಿಗಳು, ಬೀದಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡುತ್ತಾರೆ. ಆ ಬಳಿಕವೂ ಪ್ಲಾಸ್ಟಿಕ್ ಕೈ ಚೀಲ ಬಳಕೆ ಮಾಡಿದರೆ ದಂಡ ವಿಧಿಸಲಾಗುತ್ತದೆ. ಅದಕ್ಕೂ ತಲೆ ಕೆಡಿಸಿಕೊಳ್ಳದ ಪಕ್ಷದಲ್ಲಿ ಅಂಗಡಿ ಪರವಾನಗಿ ರದ್ದು ಪಡಿಸುವ ಜತೆಗೆ ಬೀಗಮುದ್ರೆ ಜಡಿಯಲಾಗುವುದು ಎಂದು ತಿಳಿಸಿದರು.

Facebook Comments