ಪ್ಲಾಸ್ಟಿಕ್ ಮರುಬಳಕೆಗೆ ಬಸ್‍ನಿಲ್ದಾಣದಲ್ಲಿ ಯಂತ್ರ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6- ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರ ಉಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಇಂದಿಲ್ಲಿ ಹೇಳಿದರು.  ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮರುಬಳಕೆ ಮಾಡುವ ಯಂತ್ರ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ಬಹಳಷ್ಟು ಹಾನಿಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಎಚ್ಚೆತ್ತುಕೊಳ್ಳದಿದ್ದರೆ ಮನುಕುಲಕ್ಕೆ ಭಾರೀ ಅಪಾಯಕಾರಿಯಾಗಲಿದೆ. ಈಗಾಗಲೇ ವಿಶ್ವಾದ್ಯಂತ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ನಮ್ಮ ಸಂಸ್ಥೆಯಲ್ಲೂ ಈಗ ಪ್ರಯಾಣಿಕರಿಗೆ ಇದರ ಬಗ್ಗೆ ತಿಳುವಳಿಕೆ ನೀಡುತ್ತಿದ್ದೇವೆ. ಇದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದರು.

ಬಾಟಲ್ ಕ್ರಷ್ ಯಂತ್ರ ಪ್ರತಿದಿನ ಕನಿಷ್ಠ 4500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಈ ಯಂತ್ರದಿಂದ ಮರುಬಳಕೆ ಆಗಲಿದೆ. ಇದರಿಂದ ರಸ್ತೆ, ಶೌಚಾಲಯದ ಕ್ಯಾಬಿನ್, ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ-ಶರ್ಟ್‍ಗಳನ್ನು ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಈ ಯಂತ್ರದ ವೆಚ್ಚ 4.3 ಲಕ್ಷವಾಗಿದ್ದು, ಗ್ರೀನ್ ಸೈಕ್ಲೋ ಫಾಸ್ಟ್ ಮತ್ತು ಸ್ಪರ್ಶ ಮಸಾಲಾರವರು ಕಾರ್ಯಗತಗೊಳಿಸಿದ್ದು, ನಿಗಮ ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದೆ. ನಿಗಮದ ಪರಿಸರ ಸ್ನೇಹಿ ಕಾರ್ಯಕ್ರಮಗಳಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ನಿರ್ದೇಶಕರಾದ ಕವಿತಾ ಎಸ್.ಮನ್ನಿಕೇರಿ, ಹಿರಿಯ ಅಧಿಕಾರಿಗಳಾದ ರಘುರಾಮ್ , ಜಾನ್ ಡಿಸೋಜಾ, ರಂಗಪ್ರಸಾದ್, ಶಿವಪ್ರಸಾದ್ ಸೇರಿದಂತೆ ಉಪಸ್ಥಿತರಿದ್ದರು.

Facebook Comments